ಮಲ್ಪೆ ಮೀನುಗಾರರಿಂದ ವಿಶೇಷ ಸಮುದ್ರ ಪೂಜೆ
ಮಲ್ಪೆ, ಆ.9: ಮಲ್ಪೆ ಮೀನುಗಾರರ ಸಂಘದ ವತಿಯಿಂದ ಸಮಸ್ತ ಮೀನುಗಾರರ ಶೇಯೋಭಿವೃದ್ಧಿಗಾಗಿ ನೂಲ ಹುಣ್ಣಿಮೆ ದಿನವಾದ ಇಂದು ಮಲ್ಪೆಯ ವಡಬಾಂಡೇಶ್ವರ ಕಡಲ ಕಿನಾರೆಯಲ್ಲಿ ಸಮುದ್ರ ಪೂಜೆಯನ್ನು ನೆರವೇರಿಸಲಾಯಿತು.
ಬೆಳಗ್ಗೆ ವಡಬಾಂಡೇಶ್ವರ ಬಲರಾಮ ದೇವಸ್ಥಾನ ಹಾಗೂ ನಾಗನಕಟ್ಟೆ ಮತ್ತು ಬೊಬ್ಬರ್ಯ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನೂರಾರು ಸಂಖ್ಯೆಯ ಮೀನುಗಾರರು, ಬಳಿಕ ಮೆರವಣಿಗೆಯ ಮೂಲಕ ಮಲ್ಪೆ ಕಡಲ ಕಿನಾರೆಗೆ ಆಗಮಿಸಿದರು. ಕಿನಾರೆಯಲ್ಲಿ ಸಂಪ್ರದಾಯದಂತೆ ಸಮುದ್ರಕ್ಕೆ ಪೂಜೆ ಸಲ್ಲಿಸಿ, ಮತ್ಸ ಸಂಪತ್ತು ವೃದ್ಧಿಯಾಗುವಂತೆ ಹಾಗೂ ಯಾವುದೇ ಅನಾಹುತಗಳು ಸಂಭವಿಸದಂತೆ ಸಮುದ್ರ ದೇವರಲ್ಲಿ ಪ್ರಾರ್ಥಿಸಲಾಯಿತು.
ತದನಂತರ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ನೇತೃತ್ವದಲ್ಲಿ ಹಾಲು, ಹಣ್ಣುಹಂಪಲು, ಎಳನೀರು, ವೀಳ್ಯ ದೆಲೆ, ಹೂವುಗಳನ್ನು ಸಮುದ್ರಕ್ಕೆ ಅರ್ಪಿಸಲಾಯಿತು. ‘ಸಮುದ್ರ ಎಂಬುದು ಮೀನುಗಾರರಿಗೆ ಅನ್ನದ ಬಟ್ಟಲು. ಮೀನುಗಾರರು ಹಾಗೂ ಮೀನುಗಾರಿಕೆಗೆ ಸಂಬಂಧಪಟ್ಟ ಎಲ್ಲರಿಗೆ ಒಳ್ಳೆಯದಾಗಲಿ ಮತ್ತು ಉತ್ತಮ ಮತ್ಸ ಸಂಪತ್ತು ಸಿಗಲಿ ಎಂದು ದೇವರಲ್ಲಿ ನಾವೆಲ್ಲ ಪ್ರಾರ್ಥಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.
ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನಾರಿಯಲ್ ಪೂರ್ಣಿಮಾ ದಿನವಾದ ಇಂದು ಪಶ್ಚಿಮ ಕರಾವಳಿಯಲ್ಲಿ ಒಂದೇ ದಿನ ಸಮುದ್ರ ಪೂಜೆ ಮಾಡುವ ಪದ್ಧತಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಸಮುದ್ರ ಪೂಜೆಯ ಬಳಿಕವೇ ಮೀನುಗಾರರು ಸಮುದ್ರಕ್ಕೆ ಇಳಿಯಬೇಕು ಎಂಬುದು ಸಂಪ್ರದಾಯ. ಆ.1ಕ್ಕೆ ಮೀನುಗಾರಿಕೆ ನಿಷೇಧ ಅವಧಿ ಮುಕ್ತಾಯಗೊಂಡಿದ್ದರೂ ದೇವರು ವಿಧಿಸಿದ್ದ ಸಮುದ್ರ ವಿಕೋಪ ಎಂಬ ನಿರ್ಬಂಧ ದಿಂದಾಗಿ ಮೀನುಗಾರರು ಸಮುದ್ರಕ್ಕೆ ಇಳಿದಿಲ್ಲ. ನಾಳೆಯಿಂದ ನಡೆಯುವ ಹೊಸ ಮೀನುಗಾರಿಕಾ ಋತು ಮೀನುಗಾರರಿಗೆ ಲಾಭದಾಯವಾಗಿರಲಿ ಮತ್ತು ಯಾವುದೇ ಅನಾಹುತ ಸಂಭವಿಸದೆ ಇರಲಿ ಎಂದು ಹಾರೈಸಿದರು.
ಚಿಕ್ಕಮಗಳೂರು ಕಪಿಲಾಶ್ರಮ ಉತ್ತರ ಕಾಶಿ ಮಠದ ಶ್ರೀರಾಮಚಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷೆ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕರಾಜ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಟಿ.ಹಿರಿಯಣ್ಣ ಕಿದಿಯೂರು, ಉಡುಪಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಾಶ್ವ ರ್ನಾಥ್ ಮೊದಲಾದವರು ಉಪಸ್ಥಿತರಿದ್ದರು. ಗೋಪಾಲ ಆರ್.ಕೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಜಲ ಮೀನುಗಾರರ ಹಕ್ಕು
ಅರಣ್ಯ ಹೇಗೆ ಆದಿವಾಸಿಗಳ ಹಕ್ಕು ಆಗಿದೆಯೋ, ಅದೇ ರೀತಿ ಜಲ ಕೂಡ ಮೀನುಗಾರರ ಹಕ್ಕು. ಮೀನುಗಾರರು ಈ ದೇಶದ ಬೆನ್ನೆಲುಬು. ರಾಷ್ಟ್ರ, ಧರ್ಮ ಹಾಗೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೀನುಗಾರರು, ಯಾವುದೇ ರೀತಿಯ ಮತೀಯ ಗಲಭೆಗಳಿಗೆ ಮಣೆ ಹಾಕದವರು ಎಂದು ಚಿಕ್ಕಮಗಳೂರು ಕಪಿಲಾಶ್ರಮ ಉತ್ತರ ಕಾಶಿ ಮಠದ ಶ್ರೀರಾಮಚಂದ್ರ ಸ್ವಾಮೀಜಿ ಹೇಳಿದ್ದಾರೆ.