ಮಂಗಳೂರು: 216 ಸೆಕೆಂಡ್‌ಗಳಲ್ಲಿ ಸಿಝ್ಲರ್ ತಿಂದು ಮುಗಿಸಿದ ಜೋಡಿ !
ಮಂಗಳೂರು, ಆ. 7: ಏಷ್ಯಾದ ಪ್ರಮುಖ ಡೈನಿಂಗ್ ಗೈಡ್ ಆಗಿರುವ ‘ದಿ 3 ಹಂಗ್ರಿ ಮೆನ್’ ಮಂಗಳೂರಿನ ಬಲ್ಮಠದ ಕೋಬೆ ಸಿಝ್ಲರ್ಸ್‌ನಲ್ಲಿ ಆಯೋಜಿಸಿದ ಸಿಝ್ಲರ್ ತಿನ್ನುವ ಸ್ಪರ್ಧೆಯಲ್ಲಿ ಜೂಡ್ ಡಿಸೋಜಾ ಮತ್ತು ವಿಷ್ಣು ಪ್ರದೀಪ್ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಇವರಿಬ್ಬರೂ 216 ಸೆಕೆಂಡ್‌ಗಳಲ್ಲಿ ಸಿಝ್ಲರ್ ತಿಂದು ಮುಗಿಸುವ ಮೂಲಕ ಕಳೆದ ವರ್ಷ ಪ್ರಥಮ ಸ್ಥಾನ ಪಡೆದಿದ್ದ ಭರತ್ ಮತ್ತು ರಚನಾ ಅವರ ದಾಖಲೆಯನ್ನು ಮುರಿದರು.
ಕಳೆದ ವರ್ಷ ಭರತ್ ಮತ್ತು ರಚನಾ 223 ಸೆಕೆಂಡ್‌ಗಳಲ್ಲಿ ಸಿಝ್ಲರ್ ತಿಂದಿದ್ದರು. ವಿಶೇಷ ಎಂದರೆ ಕಳೆದ ವರ್ಷ ಪ್ರಥಮ ಸ್ಥಾನದಲ್ಲಿದ್ದ ಭರತ್ ಈ ಬಾರಿ ಕೇವಲ ಎರಡು ಸೆಕೆಂಡ್‌ಗಳ ಅಂತರದಿಂದ ಎರಡನೆ ಸ್ಥಾನ ಪಡೆದುಕೊಂಡರು.
ವಿಜೇತ ತಂಡವು ಒಂದು ತಿಂಗಳ ಕಾಲ ಉಚಿತವಾಗಿ ಸಿಝ್ಲರ್ ತಿನ್ನುವ ಅವಕಾಶದ ಜತೆಗೆ ವೀರಾಸ್ ಯುನಿಸೆಕ್ಸ್ ಫ್ಯಾಮಿಲಿ ಸೆಲೂನ್‌ನಿಂದ 13,000 ರೂ. ಮೌಲ್ಯದ ಮೇಕ್ ಓವರ್ ವೋಚರ್ ತಮ್ಮದಾಗಿಸಿಕೊಂಡರು. ಇದಲ್ಲದೆ ಎವೆರಿಡೇ ಸೂಪರ್ ಮಾರ್ಕೆಟ್ ಹಾಗೂ ಫಾರ್ಮ್ ಬ್ಯಾಗ್‌ನಿಂದ ವಿವಿಧ ಹ್ಯಾಂಪರ್‌ಗಳು ಮತ್ತು ವೋಚರ್‌ಗಳನ್ನು ವಿಜೇತರು ಪಡೆದರು.
ಇದೊಂದು ವಿಶೇಷ ಸ್ಪರ್ಧೆಯಾಗಿದ್ದು, 70ಕ್ಕೂ ಅಧಿಕ ಸಿಝ್ಲರ್ ಪ್ರಿಯರು ಈ ಸ್ಪರ್ಧಾ ಕಣದಲ್ಲಿದ್ದರು. 18 ವರ್ಷದಿಂದ 40 ವರ್ಷದವರೆಗಿನ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ತಿನ್ನುವ ತಮ್ಮ ಕೌತುಕವನ್ನು ಪ್ರದರ್ಶಿಸಿದರು.
'ನಾವು ಸ್ಪರ್ಧೆಯಲ್ಲಿ ಗೆದ್ದಿರುವ ಬಗ್ಗೆ ನಮಗೆ ನಂಬಲಾಗುತ್ತಿಲ್ಲ. ವ್ಯವಸ್ಥಿತವಾಗಿ ತಿಂಡಿಯನ್ನು ತಿಂದು ಮುಗಿಸುವ ಬಗ್ಗೆ ಆಲೋಚಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ಇದೀಗ ಜಯಗಳಿಸಿರುವುದು ಸಂತಸ ತಂದಿದೆ. 'ದಿ 3 ಹಂಗ್ರಿ ಮೆನ್' ಭವಿಷ್ಯದಲ್ಲಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಿದರೆ ಅದರಲ್ಲಿ ಭಾಗವಹಿಸಲು ನಾವು ಉತ್ಸುಕರಾಗಿದ್ದೇವೆ' ಎಂದು ವಿಜೇತರಾದ ಜೂಡ್ ಮತ್ತು ವಿಷ್ಣು ಪ್ರತಿಕ್ರಿಯಿಸಿದ್ದಾರೆ.
ಕೊಬೆ ಸಿಝ್ಲರ್ಸ್‌ನ ಆಡಳಿತ ನಿರ್ದೇಶಕ ಹ್ಯಾರಿಸ್ ಇಬ್ರಾಹಿಂ ಅವರು ಪ್ರತಿಕ್ರಿಯಿಸಿ, 'ಈ ಸ್ಪರ್ಧೆ ಆಯೋಜಿಸಲಾದ ರೀತಿ ನಮಗೆ ಸಂತಸ ತಂದಿದೆ. ಇಷ್ಟು ವೇಗವಾಗಿ ಸಿಝ್ಲರನ್ನು ತಿನ್ನಲು ಸಾಧ್ಯ ಎಂದು ನಾನಂತೂ ಊಹೆಯೂ ಮಾಡಿರಲಿಲ್ಲ' ಎಂದಿದ್ದಾರೆ.
'ಈ ಸ್ಪರ್ಧೆಗೆ ಪ್ರತಿಯೊಬ್ಬರಿಂದ ದೊರಕಿದ ಬೆಂಬಲ ನಮಗೆ ಖುಷಿ ನೀಡಿದೆ. ಮುಂದೆಯೂ ಇಂತಹ ಆಕರ್ಷಕ ಹಾಗೂ ಕುತೂಹಲಕಾರಿ ಇನ್ನಷ್ಟು ವಿನೂತನ ಸ್ಪರ್ಧೆಗಳ್ನನು ನಾವು ಆಯೋಜಿಸಲಿದ್ದೇವೆ' ಎಂದು ನಿಖಿಲ್ ಪೈ ಮತ್ತು ಕೊಲಿನ್ ತಿಳಿಸಿದ್ದಾರೆ.