×
Ad

ವರ್ಷದೊಳಗೆ ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಉಡುಪಿ: ಸಚಿವ ಪ್ರಮೋದ್

Update: 2017-08-07 19:50 IST

ಮಣಿಪಾಲ, ಆ.7: ಇನ್ನು ಒಂದು ವರ್ಷದೊಳಗೆ ಉಡುಪಿ ಜಿಲ್ಲೆಯನ್ನು ತಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ರೀತಿಯ ಪ್ರಯತ್ನ ಸಾಗಿದ್ದು, ಇದಕ್ಕೆ ಜಿಲ್ಲೆಯ ಜಿಪಂ ಸದಸ್ಯರಿಂದ ಹಿಡಿದು ಗ್ರಾಪಂ ಸದಸ್ಯರವರೆಗೆ ಪ್ರತಿಯೊಬ್ಬ ಜನಪ್ರತಿನಿಧಿಗಳ ಹಾಗೂ ಜಿಲ್ಲೆಯ ಪ್ರತಿಯೊಂದು ಮನೆಯವರ ಸಹಕಾರ ಅಗತ್ಯ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯ ಬಗ್ಗೆ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಆಯೋಜಿಸಲಾದ ತರಬೇತಿ ಕಾರ್ಯಾಗಾರ ಹಾಗೂ ಸ್ವಚ್ಛ ಉಡುಪಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತಿದ್ದರು.

ವೆಲ್ಲೂರಿನ ಇಂಡಿಯನ್ ಗ್ರೀನ್ ಸರ್ವಿಸಸ್‌ನ ಶ್ರೀನಿವಾಸನ್ ವೆಲ್ಲೂರು ಅವರು ಕಸವನ್ನು ರಸವನ್ನಾಗಿ, ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ರೀತಿಯನ್ನು ಹೇಳಿಕೊಡುತಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬ ಜನರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಿದರೆ, ಇದರಲ್ಲಿ 5000 ಮಂದಿಗೆ ಉದ್ಯೋಗ ನೀಡುವುದಲ್ಲದೇ, ಪ್ರಾಣಿ, ಪಕ್ಷಿಗಳಿಗೂ ಇದರಿಂದ ಸಾಕಷ್ಟು ಅನುಕೂಲವಿದೆ ಎಂದರು.

ಜಿಲ್ಲೆಯಲ್ಲಿ ಪ್ರತಿ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಒಂದು ವರ್ಷದೊಳಗೆ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕೆ ಪ್ರತಿ ಯೊಬ್ಬರೂ ಮನಸ್ಸು ಮಾಡಬೇಕು ಹಾಗೂ ಪ್ರತಿ ಕುಟುಂಬ ಸಹಕರಿಸಬೇಕು ಎಂದು ಪ್ರಮೋದ್ ಮಧ್ವರಾಜ್ ನುಡಿದರು.
ಉಡುಪಿ ಜಿಲ್ಲೆ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್‌ನಲ್ಲಿ ಇಡಿ ದೇಶದಲ್ಲೇ ಗಮನಾರ್ಹ ಸಾಧನೆ ಮಾಡಿದೆ. ಜಿಲ್ಲೆಯ 158 ಗ್ರಾಪಂಗಳು ಶೇ.100ರಷ್ಟು ಅಭಿವೃದ್ಧಿ ಸಾಧಿಸಿದ ಅಪರೂಪದ ಸಾಧನೆ ಮಾಡಿವೆ. ಜಿಲ್ಲೆಯ ಶಿಶು ಮರಣ ಹಾಗೂ ತಾಯಿ ಮರಣ ಪ್ರಮಾಣ ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಎಂಬ ಹೆಗ್ಗಳಿಕೆ ಇದೆ. ಅದೇ ರೀತಿ ಈಗ ಜಿಲ್ಲೆಯ ಪ್ರಮುಖ ಸಮಸ್ಯೆಯಾಗಿ ಗುರುತಿಸಿ ಕೊಳ್ಳುವ ತ್ಯಾಜ್ಯ ವಿಲೇವಾರಿಯನ್ನು ಯಶಸ್ವಿಗೊಳಿಸಿ ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಉಡುಪಿ, ದೇಶದಲ್ಲಿ ಗುರುತಿಸಿಕೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಮಾತನಾಡಿ, ಸಮರ್ಪಕ ಕಸ ವಿಲೇವಾರಿ ಮನೆಗಳಿಂದಲೇ ಪ್ರಾರಂಭಗೊಳ್ಳಬೇಕು. ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳು ಮತ್ತು ವಸತಿಗೃಹಗಳ ಆವರಣದಲ್ಲಿ ತ್ಯಾಜ್ಯ ಮರು ಬಳಕೆ ಕುರಿತು ಅಭಿಯಾನದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ವೆಲ್ಲೂರು ಶ್ರೀನಿವಾಸನ್, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ, ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಪೌರಾಯುಕ್ತ ಮಂಜುನಾಥಯ್ಯ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭ, ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News