ಕಟ್ಟಡಗಳ ನಿರ್ಮಾಣವೇ ಅಭಿವೃದ್ಧಿಯೆಂಬ ಭ್ರಮೆಯಾಗಿದೆ: ಚಂದ್ರಶೇಖರ ಕಂಬಾರ ಕಳವಳ
ಬೆಂಗಳೂರು, ಆ.7: ನಮ್ಮ ಸರಕಾರಗಳು ವಿದೇಶದ ಉದ್ಯಮಿಗಳನ್ನು ಕರೆತಂದು ಕಾಡನ್ನು ನಾಶಮಾಡಿ ಕಟ್ಟಡಗಳನ್ನು ನಿರ್ಮಿಸುವುದನ್ನೇ ಅಭಿವೃದ್ಧಿ ಎಂಬ ಭ್ರಮೆಯಲ್ಲಿದ್ದಾರೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಕಳವಳ ವ್ಯಕ್ತಪಡಿಸಿದ್ದಾರೆ.
ಸೋಮವಾರ ಕಾಡುಮಲ್ಲೇಶ್ವರ ಗೆಳೆಯರ ಬಳಗ ನಗರದ ಕಾಡುಮಲ್ಲೇಶ್ವರ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ‘ಹಾಡು ಬೆಂಗಳೂರ’ ಹಾಗೂ ನೆಲ, ಜಲ ಉಳಿಸಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜನಪ್ರತಿನಿಧಿಗಳು ವಿದೇಶಿ ಉದ್ಯಮಿಗಳ ಮೇಲೆ ವಿಪರೀತವಾದ ವ್ಯಾಮೋಹವನ್ನು ಬೆಳೆಸಿಕೊಂಡಿದ್ದಾರೆ. ಅವರಿಗಾಗಿ ನಾಡಿನ ನೆಲ, ಜಲವನ್ನು ಉಚಿತವಾಗಿ ಕೊಡಲು ಸಿದ್ಧರಿದ್ದಾರೆ. ಇವರ ಪರಿಸರ ವಿರೋಧಿ ನೀತಿಯಿಂದಾಗಿ ರಾಜ್ಯದಲ್ಲಿ ಕಾಡುಗಳು ನಾಶವಾಗುತ್ತಿವೆ. ದಿನೇ ದಿನೇ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಯುವಜನತೆ ನೆಲ, ಜಲದ ಕುರಿತು ಅರಿವು ಹಾಗೂ ಅಭಿಮಾನವನ್ನು ಮೂಡಿಸಿಕೊಳ್ಳಬೇಕು ಎಂದು ಅವರು ಆಶಿಸಿದರು.
ಗಿಡಮರಗಳನ್ನು ತನ್ನ ಮಕ್ಕಳಂತೆ ಪೋಷಿಸಿ ಬೆಳೆಸಿದ ಸಾಲುಮರದ ತಿಮ್ಮಕ್ಕ ನಿಜವಾದ ಕಾಡಿನ ದೇವತೆಯಾಗಿದ್ದಾಳೆ. ಅಭಿವೃದ್ಧಿಯ ನೆಪದಲ್ಲಿ ಕಾಡು ಕಡಿಯುವ ಯೋಚನೆ ಬರುವ ಮೊದಲೇ ಸಾಲು ಮರದ ತಿಮ್ಮಕ್ಕ ಮರಗಳನ್ನು ಬೆಳೆಸುವ ಮೂಲಕ ಆದರ್ಶಪ್ರಾಯರಾದರು. ಇಂದಿನ ಯುವ ಪೀಳಿಗೆ ಇವರ ಹಾದಿಯಲ್ಲಿ ಸಾಗುವ ಮೂಲಕ ಕಾಡನ್ನು ಸಂರಕ್ಷಿಸುವ ಹೊಣೆಗಾರಿಕೆ ಹೊರಬೇಕೆಂದು ಅವರು ಮನವಿ ಮಾಡಿದರು.
ಪರಿಸರವಾದಿ ಜನಾರ್ದನ ಕೆಸರಗದ್ದೆ ಮಾತನಾಡಿ, ನಮ್ಮ ಪಠ್ಯಗಳಲ್ಲಾಗಲಿ, ಮಾಧ್ಯಮಗಳಲ್ಲಾಗಿ ನೆಲ, ಜಲದ ಕುರಿತು ಅರಿವನ್ನು ಮೂಡಿಸುವಂತಹ ಅಂಶಗಳು ಇಲ್ಲವಾಗಿದೆ. ಹೀಗಾಗಿ ಇಂದಿನ ಯುವಜನತೆಗೆ ನೆಲ, ಜಲದ ಕುರಿತು ಅರಿವು ಹಾಗೂ ಅಭಿಮಾನ ಮೂಡಿಸುವುದು ನಮ್ಮ ಜವಾಬ್ದಾರಿ ಎಂಬ ಭಾವನೆಯೊಂದಿಗೆ ‘ಹಾಡು ಬೆಂಗಳೂರು’ ಜಾಗೃತಿ ಹಾಡುಗಳ ಜಾಥಾವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ತಿಂಗಳ ಅಂತ್ಯದವರೆಗೆ ಬೆಂಗಳೂರು ಶಾಲಾ-ಕಾಲೇಜು ಹಾಗೂ ವಿವಿಧ ಸಂಘ, ಸಂಸ್ಥೆಗಳಲ್ಲಿ ಹಾಡು ಬೆಂಗಳೂರು ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕನಿಷ್ಠ 3ಸಾವಿರ ಜನರಿಂದ ನೆಲ-ಜಲದ ಕುರಿತು ಅರಿವನ್ನು ಮೂಡಿಸುವ ಉದ್ದೇಶ ನಮ್ಮದಾಗಿದೆ. ಇದಕ್ಕೆ ಸಾರ್ವಜನಿಕರಿಂದ ಸಹಕಾರ ಸಿಗಬೇಕಾಗಿದೆ ಎಂದು ಅವರು ತಿಳಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ಕೆಲವು ಪಟ್ಟಭದ್ರರು ಹಾಗೂ ಪರಿಸರ ವಿರೋಧಿಗಳು ಕಾಡುಮಲ್ಲೇಶ್ವರವನ್ನು ಆಕ್ರಮಿಸುವ ಹುನ್ನಾರ ಹೊಂದಿದ್ದರು. ಆದರೆ, ಕಾಡುಮಲ್ಲೇಶ್ವರ ಗೆಳೆಯರ ಬಳಗವು ಇದಕ್ಕೆ ಅವಕಾಶ ಮಾಡಿಕೊಡದೆ ಸಂರಕ್ಷಿಸಿದ್ದೇವೆ. ಹಂತ, ಹಂತವಾಗಿ ಬೆಂಗಳೂರು ನಗರದಾದ್ಯಂತ ಮರಗಿಡಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಭೂಮ್ತಾಯಿ ಬಳಗದಿಂದ ಪರಿಸರ ಗೀತೆಗಳನ್ನು ಹಾಡಲಾಯಿತು. ಈ ವೇಳೆ ಪರಿಸರವಾದಿ ಸಾಲುಮರದ ತಿಮ್ಮಕ್ಕ, ಲೇಖಕಿ ಲೀಲಾ ಸಂಪಿಗೆ, ಮಾನವ ಬಂಧುತ್ವ ವೇದಿಕೆಯ ನಗರ ಸಂಚಾಲಕ ಹುಲಿ ಹೈದರ್ ಕನಕಾಚಲ, ಮೂಡನಹಳ್ಳಿ ನಾಗರಾಜು ಮತ್ತಿತರರಿದ್ದರು.