‘ಹನಿಟ್ರ್ಯಾಪ್’: ಯುವತಿ ಸಹಿತ ಮೂವರ ಸೆರೆ
ಮಂಗಳೂರು, ಆ.7: ವಿದೇಶಿಯರಿಗೆ ವಾಟ್ಸ್‌ಆ್ಯಪ್‌ನಲ್ಲಿ ಹುಡುಗಿಯರ ಭಾವಚಿತ್ರವನ್ನು ತೋರಿಸಿ ಅವರಿಂದ ತಮ್ಮ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿಸಿ ವಂಚಿಸುತ್ತಿದ್ದ ತಂಡವನ್ನು ಪಾಂಡೇಶ್ವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಎಕ್ಕೂರು ನಿವಾಸಿ ಕುಲದೀಪ್ (28), ಫರಂಗಿಪೇಟೆ ನಿವಾಸಿ ಕೀರ್ತನ್ (26) ಹಾಗೂ ಓರ್ವ ಯುವತಿಯನ್ನು ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಮೂವರು ತಲೆಮರೆಸಿಕೊಂಡಿದ್ದಾರೆ. ಬಂಧಿತರು ಹನಿಟ್ರ್ಯಾಪ್ ಜಾಲದ ಸದಸ್ಯರಾಗಿದ್ದು, ವಿದೇಶಿಯರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪಾಂಡೇಶ್ವರ ಠಾಣೆ ಪೊಲೀಸರು ರವಿವಾರ ಸಂಜೆ ಗಸ್ತು ತಿರುಗುತ್ತಿದ್ದ ಸಂದರ್ಭ ಕುಲದೀಪ್, ಕೀರ್ತನ್ ಹಾಗೂ ಇತರರು ರಸ್ತೆಯಲ್ಲಿ ಜಗಳ ಮಾಡಿಕೊಂಡಿದ್ದು, ವಿಚಾರಿಸಿದಾಗ ಹಣದ ವ್ಯವಹಾರ ಬೆಳಕಿಗೆ ಬಂದಿತ್ತು. ಪೊಲೀಸರು ಮೂವರನ್ನು ಠಾಣೆಗೆ ಕರೆದೊಯ್ದು ಇನ್ನಷ್ಟು ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿರುವುದನ್ನು ಯುವತಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಸ್ಥಳೀಯ ಯುವತಿಯರನ್ನು ಬಳಸಿಕೊಂಡು ವಾಟ್ಸ್‌ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವಿದೇಶಿಯರಿಗೆ ಸೆಕ್ಸ್ ಆಮಿಷವನ್ನೊಡ್ಡಿ ಅವರಿಂದ ಹಣವನ್ನು ತಮ್ಮ ಅಕೌಂಟ್‌ಗಳಿಗೆ ವರ್ಗಾಯಿಸುತ್ತಿದ್ದರು ಎನ್ನಲಾಗಿದೆ. 5-6 ಸಾವಿರ ಡಾಲರ್‌ನಿಂದ ಹಿಡಿದು 70 ಸಾವಿರ ಡಾಲರ್‌ವರೆಗೆ ಹಣವನ್ನು ಪಡೆದುಕೊಂಡು ಯುವತಿಯರನ್ನು ವಿದೇಶಕ್ಕೆ ಕಳುಹಿಸುವುದಾಗಿ ನಂಬಿಸಿ ವಂಚಿಸುತ್ತಿದ್ದು ತನಿಖೆಯಿಂದ ಬಯಲಾಗಿದೆ.
ವಿದೇಶಿಯರಿಂದ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡ ಬಳಿಕ ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡುತ್ತಿದ್ದರು. ಹಾಗಾಗಿ ಇದರಿಂದ ಹಣ ಕಳೆದುಕೊಂಡ ವಿದೇಶಿಯರು ವಂಚನೆಗೆ ಒಳಗಾಗುತ್ತಿದ್ದರು. ಆರೋಪಿಗಳು ಯುವತಿಯರನ್ನು ಬಳಸಿಕೊಂಡು ವಿದೇಶಿಯರಿಗೆ ವಿಡಿಯೊ ಕಾಲ್ ಮಾಡುವ ಮೂಲಕ ತಮ್ಮ ಖೆಡ್ಡಾಕ್ಕೆ ಬೀಳಿಸುತ್ತಿದ್ದರು. ಇದಕ್ಕೆ ಸಾಕ್ಷಿಯೆಂಬಂತೆ ಕೀರ್ತನ್ ಮೊಬೈಲ್‌ನಲ್ಲಿ ಅರೆನಗ್ನ ಯುವತಿಯರ ಭಾವಚಿತ್ರಗಳು ಸಿಕ್ಕಿವೆ.
ಇಲ್ಲಿಯವರೆಗೆ 50ಕ್ಕೂ ಅಧಿಕ ಮಂದಿಗೆ ವಂಚಿಸಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದು, ಇವರ ಜಾಲದಲ್ಲಿ ಇನ್ನೂ ಹಲವು ಮಂದಿ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಸ್ಸೈ ಅನಂತ ಮುರ್ಡೇಶ್ವರ ನೇತೃತ್ವದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.