ಸುಜೀರು: ಕಾಂಕ್ರೀಟಿಕೃತ ರಸ್ತೆಯ ಉದ್ಘಾಟನೆ
ಬಂಟ್ವಾಳ, ಆ. 7: ಸರಕಾರ ಕೊಡುವ ಎಲ್ಲಾ ಸವಲತ್ತುಗಳು ಸಮಾಜದ ಕಟ್ಟ ಕಡೆಯ ಜನರನ್ನು ತಲುಪಬೇಕು. ಈ ರಾಜ್ಯದ ಹಿಂದುಳಿದ ಹಾಗೂ ಕುಗ್ರಾಮಗಳಿಗೂ ಸರಕಾರದ ಯೋಜನೆಗಳು ಮುಟ್ಟಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.
ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಜೀರು ಮಲ್ಲಿ ಕೋರ್ದಬ್ಬು ದೈವಸ್ಥಾನ ಸಂಪರ್ಕ ರಸ್ತೆಗೆ ತನ್ನ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರಾದ ಅನುದಾನದಿಂದ ಅಭಿವೃದ್ಧಿಗೊಂಡ ಕಾಂಕ್ರೀಟಿಕೃತ ರಸ್ತೆಯನ್ನು ಉದ್ಘಾಟಿಸಿ, ಕೋರದ್ಬು ದೈವಸ್ಥಾನದ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ರಸ್ತೆ ನಿರ್ಮಾಣದಿಂದ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಿದೆ. ಮುಂದೆಯೂ ಈ ಭಾಗದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಶ್ರಮಿಸುವುದಾಗಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್‌ರನ್ನು ಸ್ಥಳೀಯರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್ಗ್, ಸದಸ್ಯರಾದ ರಮ್ಲಾನ್ ಮಾರಿಪಳ್ಳ, ಇಕ್ಬಾಲ್ ಸುಜೀರ್, ಝಾಹೀರ್, ಗಣೇಶ್ ದತ್ತ ನಗರ, ಮಾಲತಿ ತಾಪಂ ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಸ್ಥಳೀಯ ಪ್ರಮುಖರಾದ ಅರುಣ್‌ಕುಮಾರ್ ನುಳಿಯಾಲುಗುತ್ತು, ಸಲಾಂ ಮಲ್ಲಿ ಮತ್ತಿತರರು ಹಾಜರಿದ್ದರು.
ದೈವಸ್ಥಾನದ ಮುಂಭಾಗದಲ್ಲಿರುವ ಬಾವಿಗೆ ರಿಂಗ್ ಅಳವಡಿಕೆ ಹಾಗೂ ಅಂಗಳಕ್ಕೆ ಇಂಟರ್‌ಲಾಕ್ ಅಳವಡಿಸುವ ಬಗ್ಗೆ ಸ್ಥಳೀಯರ ಮನವಿಗೆ ಸ್ಪಂದಿಸಿದ ಸಚಿವ ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿಕೊಡುವಂತೆ ಕಿರಿಯ ಎಂಜಿನಿಯರ್ ರವಿಚಂದ್ರರಿಗೆ ಸೂಚಿಸಿದರು. ಇದೇ ಸಂದರ್ಭ ಸುಜೀರು ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ ನೆರೆವೇರಿಸಿದರು.