ಸಮುದ್ರ ಪೂಜೆ ಸಲ್ಲಿಸಿ ಮತ್ಸಸಂಪತ್ತಿಗಾಗಿ ಪ್ರಾರ್ಥನೆ
ಮಂಗಳೂರು, ಆ. 7: ಪ್ರಸಕ್ತ ಮೀನುಗಾರಿಕಾ ಅವಧಿಯಲ್ಲಿ ಹೇರಳವಾಗಿ ಮತ್ಸ ಸಂಪತ್ತು ದೊರಕಲಿ ಎಂದು ಸಮುದ್ರಕ್ಕೆ ಪೂಜೆ ಸಲ್ಲಿಸಿ, ಆರತಿ ಬೆಳಗಿ, ಪ್ರಸಾದ, ಹಾಲು, ಸೀಯಾಳ ಹಾಗೂ ತೆಂಗಿನ ಕಾರ್ಯಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು.
ತಣ್ಣೀರುಬಾವಿ ಬಳಿ ನಡೆದ ಸಮುದ್ರ ಪೂಜೆಯಲ್ಲಿ ಸಮುದ್ರದಲ್ಲಿ ಯಾವುದೇ ರೀತಿಯ ದುರಂತಗಳು ಸಂಭವಿಸದಂತೆ ಮೀನುಗಾರರನ್ನು ರಕ್ಷಿಸುವಂತೆಯೂ ಪ್ರಾರ್ಥಿಸಲಾಯಿತು.
ಪೂಜೆಗೆ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಕದ್ರಿ ಕ್ಷೇತ್ರ ಸುವರ್ಣ ಕದಳೀ ಮಠದ ಮಠಾಧಿಪತಿ ಶ್ರೀರಾಜಾಯೋಗಿ ನಿರ್ಮಲನಾಥಜೀ ಮಹಾರಾಜ್ ಆಶೀರ್ವಚನ ನೀಡಿದರು. ಪೂಜೆಯಲ್ಲಿ ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾ ವ್ಯಾಪ್ತಿಯಲ್ಲಿ ಬರುವ ಬೋಳೂರು, ಬೊಕ್ಕಪಟ್ಣ, ಕುದ್ರೋಳಿ 2ಮತ್ತು 3, ಹೊಗೆ ಬಜಾರ್, ಬೋಳಾರ, ಜಪ್ಪು, ನೀರೇಶ್ವಾಲ್ಯ, ಪಡುಹೊಗೆ ಮೊಗವೀರ ಗ್ರಾಮದ ಮೊಗವೀರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಮತ್ಸ ಉದ್ಯಮಿಗಳಾದ ಅಶ್ವಿನ್ ಬೋಳಾರ, ಅನಿಲ್ ಕುಮಾರ್ ಕರ್ಕೇರ, ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾ ಅಧ್ಯಕ್ಷ ದಿವಾಕರ ಕಾಂಚನ್ ಬೆಂಗೆರೆ, ಉಪಾಧ್ಯಕ್ಷ ಯಾದವ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಸುವರ್ಣ, ಕೋಶಾಧಿಕಾರಿ ಶ್ಯಾಮಸುಂದರ್ ಕಾಂಚನ್, ಏಳು ಗ್ರಾಮದ ಪ್ರತಿನಿಧಿ ಮಾಧವ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.