ಲಾಭವಲ್ಲ; ಜನಸೇವೆ ಕೆಎಸ್ಸಾರ್ಟಿಸಿ ಗುರಿ: ಗೋಪಾಲ ಪೂಜಾರಿ
ಮಣಿಪಾಲ, ಆ.7: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಕೇವಲ ಲಾಭದ ದೃಷ್ಠಿಯಿಂದ ಬಸ್‌ಗಳನ್ನು ಓಡಿಸುತ್ತಿಲ್ಲ. ಜನಸೇವೆಯೇ ನಮ್ಮ ಪ್ರಧಾನ ಗುರಿಯಾಗಿದೆ ಎಂದು ನಿಗಮದ ಅಧ್ಯಕ್ಷ ಹಾಗೂ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.
ನಿಗಮದ ಆಡಳಿತ ನಿರ್ದೇಶಕ ಕೆ.ಉಮಾಶಂಕರ್ ಹಾಗೂ ಇತರ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶದ ಜನತೆಗೂ ಸಮರ್ಪಕ ಸಾರಿಗೆ ಸೇವೆ ಒದಗಿಸುವ ಉದ್ದೇಶದಿಂದ ಅಗತ್ಯವಿರುವ, ಜನರಿಂದ ಬೇಡಿಕೆ ಇರುವ ಪ್ರದೇಶ ಗಳಿಗೆ ಹೊಸ ಬಸ್‌ಗಳನ್ನು ಅಳವಡಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಸರಕಾರಿ ಬಸ್‌ಗಳ ಸೇವೆಯನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದ್ದು, ಜನಪ್ರಿಯವಾಗಿದೆ ಎಂದರು.
ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗಾಗಿ ಸರಕಾರಿ ಬಸ್ ಸೇವೆಗೆ ಬೇಡಿಕೆ ಇದ್ದು, ಬೈಂದೂರು ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಲಾ ಸಮಯದಲ್ಲಿ ಹೆಚ್ಚಿನ ಬಸ್ ವ್ಯವಸ್ಥೆಯನ್ನು ಒಂದೆರಡು ದಿನಗಳಲ್ಲಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 55 ಸರಕಾರಿ ಬಸ್‌ಗಳಿಗೆ ಪರವಾನಿಗೆ ಸಿಕ್ಕಿದ್ದು, ಇನ್ನೂ 16 ರೂಟ್‌ಗಳಿಗೆ ಪರವಾನಿಗೆ ಕೇಳಿ್ದೇವೆ ಎಂದರು.
ಉಡುಪಿ ಡಿವಿಜನ್: ಉಡುಪಿ ಜಿಲ್ಲೆಯಲ್ಲಿ ನಾವು ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಬಂದಿಲ್ಲ. ಜನರಿಗೆ ಸೇವೆ ನೀಡಲು ಬಂದಿದ್ದೇವೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರ ನಡುವೆ ಇಂದು ಕೆಎಸ್ಸಾರ್ಟಿಸಿ ಬಸ್ ಜನಪ್ರಿಯಗೊಂಡಿದೆ. ಜನರ ಬೇಡಿಕೆ ಇದ್ದ ಕಡೆಗೆ ನಾವು ಬಸ್‌ಗಳನ್ನು ಓಡಿಸುತ್ತೇವೆ.
ಉಡುಪಿ ಜಿಲ್ಲೆಯಲ್ಲಿ ನಾವು ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಬಂದಿಲ್ಲ. ಜನರಿಗೆ ಸೇವೆ ನೀಡಲು ಬಂದಿದ್ದೇವೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರ ನಡುವೆ ಇಂದು ಕೆಎಸ್ಸಾರ್ಟಿಸಿ ಬಸ್ ಜನಪ್ರಿಯಗೊಂಡಿದೆ. ಜನರ ಬೇಡಿಕೆ ಇದ್ದ ಕಡೆಗೆ ನಾವು ಬಸ್‌ಗಳನ್ನು ಓಡಿಸುತ್ತೇವೆ. ಕರಾವಳಿ ಜಿಲ್ಲೆಗಳಲ್ಲಿ ರಾಜ್ಯ ಸಾರಿಗೆಯನ್ನು ವಿಸ್ತರಿಸಲು ಯೋಜನೆಯನ್ನು ರೂಪಿಸಲಾಗಿದೆ. ಬೈಂದೂರಿನಲ್ಲಿ ಹಾಗೂ ಕಾರ್ಕಳದಲ್ಲಿ ಹೊಸ ಘಟಕಗಳನ್ನು ಸ್ಥಾಪಿಸಲಿದ್ದೇವೆ. ಬೈಂದೂರು ಘಟಕಕ್ಕೆ 10 ಕೋಟಿ ರೂ.ಮಂಜೂರಾಗಿದ್ದು, ರಾ.ಹೆದ್ದಾರಿ ಪ್ರಾಧಿಕಾರದ ಅನುಮೋದನೆ ಸಿಕ್ಕಿದ ಕೂಡಲೇ ಕೆಲಸ ಪ್ರಾರಂಭಗೊಳ್ಳಲಿದೆ. ಕಾರ್ಕಳದಲ್ಲಿ ಘಟಕಕೆ್ಕ ಜಾಗವನ್ನು ಕೇಳಿದ್ದೇವೆ ಎಂದರು.
ಕುಂದಾಪುರದಲ್ಲಿ ಈಗ ಇರುವ ಕೆಎಸ್ಸಾರ್ಟಿಸಿ ಡಿಪೋ ಜಾಗ ಸಾಲದಾಗಿದ್ದು, ಇದಕ್ಕಾಗಿ ಹಟ್ಟಿಯಂಗಡಿಯಲ್ಲಿ ಐದು ಎಕರೆ ಜಾಗವನ್ನು ಗುರುತಿಸಲಾಗಿದೆ. ಕುಂದಾಪುರದಿಂದ ಆಗುಂಬೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರುಗಳಿಗೆ ಬಸ್ ರೂಟ್‌ಗಳನ್ನು ಪ್ರಾರಂಭಿಸಲಾಗುತ್ತಿದೆ.
ಉಡುಪಿಯನ್ನು ಹೊಸ ಡಿವಿಜನ್ ಆಗಿ ರೂಪಿಸಲು ಪ್ರಯತ್ನ ನಡೆಯುತ್ತಿದೆ. ಬನ್ನಂಜೆಯಲ್ಲಿ ಕೆಎಸ್ಸಾರ್ಟಿಸಿ ಪಡೆದಿರುವ 2.5 ಎಕರೆ ಜಾಗದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸರಕಾರಿ ಬಸ್‌ನಿಲ್ದಾಣ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಮುಂದಿನ ತಿಂಗಳೊಳಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ನೆಲಮಟ್ಟದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದ್ದು, ಒಮ್ಮೆಲೆ 100 ಬಸ್‌ಗಳು ನಿಲುಗಡೆಗೆ ಅವಕಾಶವಿರಲಿದೆ. ಮೇಲೆ ಮಲ್ಪಿಫ್ಲೆಕ್ಸ್, ಮಾಲ್‌ಗಳನ್ನು ನಿರ್ಮಿಸಿ ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುವುದು ಎಂದರು.
ಉಡುಪಿ ನಗರಸಾರಿಗೆಯ ಬಸ್ ನಿಲ್ದಾಣ ಹಳೆಯ ಡಿಡಿಪಿಐ ಕಚೇರಿ ತಾಣದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ತಲೆ ಎತ್ತಲಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಈ ತಿಂಗಳ ಕೊನೆಯೊಳಗೆ ಗುದ್ದಲಿ ಪೂಜೆ ನಡೆಯಲಿದೆ ಎಂದು ಗೋಪಾಲ ಪೂಜಾರಿ ತಿಳಿಸಿದರು.
1706 ಹೊಸ ಬಸ್ ಖರೀದಿ: ಕೆಎಸ್ಸಾರ್ಟಿಸಿ 9ಲಕ್ಷ ಕಿ.ಮೀ. ಓಡಿದ ಎಲ್ಲಾ ಹಳೆಯ ಬಸ್‌ಗಳನ್ನು ಬದಲಿಸಲು ನಿರ್ಧರಿಸಲಿದ್ದು, ಈ ವರ್ಷ 1706 ಹೊಸ ಬಸ್‌ಗಳನ್ನು ಖರೀದಿಸಲಿದೆ. 121 ವೊಲ್ವೋ ಬಸ್ ಸೇರಿದಂತೆ 850 ಹೊಸ ಬಸ್‌ಗಳು ಶೀಘ್ರವೇ ಸರಬರಾಜಾಗಲಿದೆ ಎಂದು ಎಂಡಿ ಉಮಾಶಂಕರ್ ತಿಳಿಸಿದರು.
ಜಿಲ್ಲೆಯಲ್ಲಿ 55 ಮಾರ್ಗದಲ್ಲಿ ಸರಕಾರಿ ಬಸ್‌ಗಳಿಗೆ ಪರವಾನಿಗೆ ಇದ್ದು, ಈಗ 46 ಬಸ್‌ಗಳು ಓಡುತ್ತಿವೆ. ವೃದ್ಧರಿಗೆ, ಮಹಿಳೆಯರಿಗೆ ಸುಲಭವಾಗಿ ಹತ್ತಿ, ಇಳಿಯಲು ಲೋಫ್ಲೋರ್ ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಇನ್ನೂ 16 ಪರವಾನಿಗೆ ಕೇಳಿದ್ದೇವೆ. ನಾವು ಖಾಸಗಿಯವರೊಂದಿಗೆ ಪೈಪೋಟಿಗೆ ರೆಡಿ. ಆದರೆ ನಮಗೆ ಮಾತ್ರ ಕಾನೂನು ಅನ್ವಯಿಸಿ, ಅವರು ಬೇಕಾಬಿಟ್ಟಿ ಕಾನೂನು ಉಲ್ಲಂಘಿಸಿ ಬಸ್ ಓಡಿಸುವುದು ಸರಿಯಲ್ಲ ಎಂದು ಉಮಾಶಂಕರ್ ಹೇಳಿದರು.
ಜಿಲ್ಲೆಯ ಖಾಸಗಿ ಬಸ್ ಮಾಲಕರ ‘ಪ್ರಭಾವ’ ಎಲ್ಲರಿಗೂ ತಿಳಿದ್ದಿದ್ದೇ ಆಗಿದೆ. ಆದರೆ ಅವರು ಕಾನೂನನ್ನು ಗೌರವಿಸಿ ಸೇವೆ ನೀಡಲಿ. ಆರೋಗ್ಯಕರ ಸ್ಪರ್ಧೆ ನಡೆಸಲಿ. ಸಣ್ಣ ತಾಂತ್ರಿಕ ಕಾರಣದೊಂದಿಗೆ ನ್ಯಾಯಾಲಯಕ್ಕೆ ಹೋಗಿ, ಜನರಿಗೆ ಸಿಗುವ ಸೌಲಭ್ಯವನ್ನು ವಂಚಿಸುವುದು ಸರಿಯಲ್ಲ ಎಂದರು. ಕೆಎಸ್ಸಾರ್ಟಿಸಿ ಸರಕಾರದ ಯಾವುದೇ ಸಬ್ಸಿಡಿ ಅಥವಾ ಅನುದಾನದ ನೆರವಿಲ್ಲದೇ, ಬಿಗುವಾದ ಆಡಳಿತ, ಉತ್ತಮ ಜನಸೇವೆಯ ಮೂಲಕ ದೇಶದ ನಂ.1 ಸಾರಿಗೆ ಸಂಸ್ಥೆಯಾಗಿ ಮಾನ್ಯತೆ ಪಡೆದಿದೆ. ಪ್ರಶಸ್ತಿಗಾಗಿ ಲಿಮ್ಕಾ ರೆಕಾರ್ಡ್‌ನಲ್ಲೂ ನಿಗಮದ ಹೆಸರು ದಾಖಲಾಗಿದೆ ಎಂದರು.
ಬಳಿಕ ಜಿಲ್ಲೆಗೆ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಸಾರಿಗೆ ಪರವಾನಿಗೆ ಮಂಜೂರಾತಿ ಕುರಿತ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರೆ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ, ನಿಗಮದ ಸದಸ್ಯ ಟಿ.ಕೆ. ಸುಧೀರ್, ಮುಖ್ಯ ಕಾನೂನು ಅಧಿಕಾರಿ ರಾಜೇಶ್, ಮಂಗಳೂರು ವಿಭಾಗದ ಮುಖ್ಯಸ್ಥ ದೀಪಕ್ ಕುಮಾರ್, ಜೈಶಾಂತ್, ಉದಯಕುಮಾರ್ ಸೇರಿದಂತೆ ನಿಗಮದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
18.5 ಲಕ್ಷ ವಿದ್ಯಾರ್ಥಿಗಳಿಗೆ ಪಾಸ್
ಕೆಎಸ್ಸಾರ್ಟಿಸಿ ರಾಜ್ಯದಲ್ಲಿ ಒಟ್ಟು 18.5 ಲಕ್ಷ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ನೀಡಿದೆ. ಏಳನೇ ತರಗತಿಯವರೆಗಿನ ಮಕ್ಕಳಿಗೆ ಉಚಿತ ಪಾಸ್ ನೀಡುವ ನಿಗಮ, ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೂ ಉಚಿತ ಪಾಸ್‌ನ ಸೇವೆ ನೀಡುತ್ತಿದೆ. ಉಳಿದಂತೆ ವಿದ್ಯಾರ್ಥಿಗಳಿಗೆ ಶೇ.25 ದರ ನಿಗದಿ ಪಡಿಸಿದ್ದೇವೆ ಎಂದು ನಿಗಮದ ಎಂಡಿ ಉಮಾಶಂಕರ್ ವಿವರಿಸಿದರು.
ರಾಜ್ಯದಲ್ಲಿ ಒಟ್ಟು 23,500 ಸರಕಾರಿ ಬಸ್‌ಗಳಿವೆ.ಇದರಲ್ಲಿ ನಿಗಮ 8500 ಬಸ್‌ಗಳನ್ನು ಹೊಂದಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಬಸ್‌ಗಳನ್ನು ಹೊಂದಿದ್ದರೂ ನಿರ್ವಹಣೆಯಲ್ಲಿ ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಅತೀ ಹೆಚ್ಚು ಎಸಿ ಬಸ್‌ಗಳನ್ನು ಓಡಿಸುವ ಹೆಗ್ಗಳಿಕೆ ನಮ್ಮದು. ಕೆಎಸ್ಸಾರ್ಟಿಸಿಯ 2500 ಬಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಇನ್ನುಳಿದ ಬಸ್‌ಗಳಿಗೆ ಎರಡನೇ ಹಂತದಲ್ಲಿ ಜಿಪಿಎಸ್ ಅಳವಡಿಸಲಾಗುವುದು. ಎಲ್ಲಾ ಬಸ್‌ಗಳಿಗೆ ಸ್ಪೀಡ್ ಗವರ್ನರ್‌ಗಳಿವೆ ಎಂದರು.
ಮಂಗಳೂರು ಮತ್ತು ಭಟ್ಕಳ ನಡುವೆ ಆರಂಭಿಸಿದ ವೋಲ್ವೊ ಬಸ್ ಜನಪ್ರಿಯವಾಗಿದ್ದು, ಶೀಘ್ರವೇ ಕುಮಟಾ ಮತ್ತು ಮಂಗಳೂರು ನಡುವೆ ವೋಲ್ವೊ ಬಸ್ ಓಡಿಸಲಾಗುವುದು ಎಂದು ಗೋಪಾಲ ಪೂಜಾರಿ ತಿಳಿಸಿದರು.