ರೈಲಿನಲ್ಲಿ ಅಸಭ್ಯ ವರ್ತನೆ: ಓರ್ವನ ಸೆರೆ
Update: 2017-08-07 22:07 IST
ಉಡುಪಿ, ಆ.7: ಪುಣೆಯಿಂದ ಎರ್ನಾಕುಲಂಗೆ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಯೊಂದಿಗೆ ಅಸಭ್ಯವಾಗಿ ವರ್ತಿಸಿದ ಓರ್ವನನ್ನು ಉಡುಪಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಈತ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ರೈಲ್ವೆ ಸಹಾಯವಾಣಿ ಸಂಖ್ಯೆ- 182 ಗೆ ಮಹಿಳಾ ಪ್ರಯಾಣಿಕರು ಕರೆ ಮಾಡಿ ದೂರು ನೀಡಿದರು. ಅದರಂತೆ ತಕ್ಷಣ ಕಾರ್ಯಾಚರಣೆ ನಡೆಸಿದ ಉಡುಪಿ ರೈಲ್ವೆ ರಕ್ಷಣಾ ದಳದ ಇನ್ಸ್‌ಪೆಕ್ಟರ್ ಶಿವರಾಮ ರಾಠೋಡ್ ಹಾಗೂ ಸಿಬ್ಬಂದಿಗಳಾದ ಗುರುರಾಜ್ ಮತ್ತು ಲೋಬೋ ಆರೋಪಿಯನ್ನು ಬಂಧಿಸಿ, ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ದಂಡ ವಿಧಿಸಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.