ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ : ಸುಭಾಶ್ ಬರಾಲ ರಾಜೀನಾಮೆಗೆ ಬಿಜೆಪಿ ಸಂಸದ ಆಗ್ರಹ
ಚಂಡಿಗಢ, ಆ. 8: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಯನ್ನು ರಕ್ಷಿಸಲು ಬಿಜೆಪಿ ಚಂಡಿಗಢ ಆಡಳಿತದ ಮೇಲೆ ಒತ್ತಡ ಹೇರುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ನಡುವೆ, ಹರಿಯಾಣದ ಬಿಜೆಪಿ ಮುಖ್ಯಸ್ಥ ಸುಭಾಶ್ ಬರಾಲಾ ರಾಜೀನಾಮೆ ನೀಡುವಂತೆ ಬಿಜೆಪಿ ಸಂಸದರೊಬ್ಬರು ಆಗ್ರಹಿಸಿದ್ದಾರೆ.
ಸುಭಾಶ್ ಬರಾಲಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕುರುಕ್ಷೇತರ ಬಿಜೆಪಿ ಸಂಸದ ರಾಜ್‌ಕುಮಾರ್ ಸೈನಿ ತಿಳಿಸಿದ್ದಾರೆ.
ಬಿಜೆಪಿ ನಾಯಕರ ಪುತ್ರ ವಿಕಾಸ್ ಬರಾಲಾ (23) ಹಾಗೂ ಆತನ ಸ್ನೇಹಿತ ಆಶಿಶ್ ಕುಮಾರ್ (27) ಶುಕ್ರವಾರ ರಾತ್ರಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯೊಬ್ಬಳು ಆರೋಪಿಸಿದ್ದಾಳೆ. ಬಳಿಕ ಅವರನ್ನು ಬಂಧಿಸಿ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿತ್ತು.
ಈ ನಡುವೆ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ, ಹರ್ಯಾಣ ಬಿಜೆಪಿಯ ಮುಖ್ಯಸ್ಥ ಸುಭಾಶ್ ಬರಾಲ ಅವರ ಪುತ್ರ ಐಎಎಸ್ ಅಧಿಕಾರಿಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ತಾನು ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಲಿದ್ದೇನೆ ಎಂದಿದ್ದಾರೆ.
ಇಬ್ಬರು ಕುಡಿದ ಗೂಂಡಾಗಳು ಐಎಎಸ್ ಅಧಿಕಾರಿಯ ಪುತ್ರಿಯನ್ನು ಅಪಹರಣಕ್ಕೆ ಪ್ರಯತ್ನಿಸಿದ ಕುರಿತು ನನ್ನ ಸಹ ವಕೀಲ ಎ.ಪಿ. ಜಗ್ಗಾ ಜೊತೆ ಚಂಡಿಗಢದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದೇನೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಹರಿಯಾಣದ ಬಿಜೆಪಿಯ ಮುಖ್ಯಸ್ಥನ ಪುತ್ರನನ್ನು ರಕ್ಷಿಸಿಕೊಳ್ಳಲು ಬಿಜೆಪಿ ಪಿತೂರಿಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.