ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ: ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು
ಪುತ್ತೂರು, ಆ. 7: ಇಲ್ಲಿನ ಪಿಜಿಯಲ್ಲಿ ವಾಸ್ತವ್ಯವಿದ್ದ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಸೋಮವಾರ ಬಂಧಿಸಿದ ನಗರ ಪೊಲೀಸರು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ನಮನ್ ನಾಯಕ್(26) ಬಂಧಿತ ಆರೋಪಿ.
ಈತನ ತಾಯಿ ನೆಲ್ಲಿಕಟ್ಟೆ ಎಂಬಲ್ಲಿ ಪಿಜಿ ನಡೆಸುತ್ತಿದ್ದು, ಆರೋಪಿ ನಮನ್ ನಾಯಕ್ ರಾತ್ರಿ ವೇಳೆ ಪಿಜಿಗೆ ಅಕ್ರಮವಾಗಿ ಪ್ರವೇಶಿಸಿ ಇಲ್ಲಿರುವ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಲಾಗಿತ್ತು. ಅಲ್ಲಿನ ಬಾಲಕಿಯರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸರು ಆರೋಪಿಯ ವಿರುದ್ದ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನಗರದ ದರ್ಬೆ ಬಳಿಯಲ್ಲಿ ಬಂಧಿಸಿದ್ದರು.
ಬಂಧಿತ ಆರೋಪಿಯನ್ನು ಬಳಿಕ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಎಸ್‌ಐ ಒಮನ ಮತ್ತು ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪವೂ ಈತನ ಮೇಲಿದೆ.