ಫರಂಗಿಪೇಟೆ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
ಬಂಟ್ವಾಳ, ಆ. 7: ನೆಮ್ಮದಿಯ ಸಮಾಜ, ಅಭಿವೃದ್ಧಿಯ ಕರ್ನಾಟಕ ಮತ್ತು ಬಲಿಷ್ಠ ಭಾರತ ನಿರ್ಮಾಣ ಕಾಂಗ್ರೆಸ್‌ನ ಕನಸಾಗಿದೆ. ಸಿದ್ದರಾಮಯ್ಯ ಸರಕಾರ ಈ ಕನಸನ್ನು ನನಸಾಗಿಸುವತ್ತ ದಾಪುಗಾಲಿಡುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.
ಪುದು ವಲಯ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಫರಂಗಿಪೇಟೆಯ ಶುಹಾ ಕಾಂಪ್ಲೆಕ್ಸ್‌ನಲ್ಲಿ ರವಿವಾರ ರಾತ್ರಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಜನರ ಮುಂದೆ ಸ್ವಾಭಿಮಾನದಿಂದ ತಲೆ ಎತ್ತಿಕೊಂಡು ಹೋಗುವ ಅವಕಾಶ ನಿರ್ಮಾಣವಾಗಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಸರಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರಿಗೆ ಪ್ರಯೋಜನವಾಗುವ ಯಾವುದೇ ಯೋಜನೆಗಳು ಜಾರಿಗೆ ಬಂದಿಲ್ಲ ಎಂದು ಟೀಕಿಸಿದ ಸಚಿವ ಯು.ಟಿ.ಖಾದರ್, ಪಕ್ಷ ಸಂಘಟನೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ಬೂತ್‌ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸ ಬೇಕು. ಯುವ ಕಾರ್ಯಕರ್ತರು ಎದ್ದು ನಿಂತರೆ ಈ ರಾಜ್ಯದಲ್ಲಿ ಕಾಂಗ್ರೆಸನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ಮಂಗಳೂರು ತಾಪಂ ಸದಸ್ಯ ಮುಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಮನಪಾ ಕಾರ್ಪೊರೇಟರ್ ವಿನಯರಾಜ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಲುಕ್ಮಾನ್, ತಾಪಂ ಸದಸ್ಯೆ ಪದ್ಮಶ್ರೀ ದುರ್ಗೇಶ್, ತಾಪಂ ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಇಸ್ಮಾಯಿಲ್ ಕೆಇಎಲ್, ರಫೀಕ್ ಪೇರಿಮಾರ್, ಪುದು ಪಂಚಾಯತ್ ಸದಸ್ಯ ರಮ್ಲಾನ್, ಇಕ್ಬಾಲ್ ಸುಜೀರು, ಝಾಹೀರ್, ಅಖ್ತರ್ ಹುಸೈನ್, ಪಕ್ಷ ಪ್ರಮುಖರಾದ ಎಫ್.ಎ.ಖಾದರ್, ವೃಂದ ಪೂಜಾರಿ, ಸೌಕತ್ ಅಲಿ, ಇಶಾನ್, ಮಜೀದ್ ಫರಂಗಿಪೇಟೆ, ಸಿದ್ದೀಕ್, ಫೈರೋರ್, ಇಮ್ತಿಯಾಝ್ ಆಲ್ಫಾ ತುಂಬೆ, ಆಸೀಫ್ ಮೇಲ್ಮನೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.