varthabharati.in ರಮಝಾನ್ ಅನುಭವ ಬರಹ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Update: 2017-08-08 17:22 GMT

ಮಂಗಳೂರು, ಆ.8: ವಿಶ್ವಾಸ್ ಬಾವಾ ಬಿಲ್ಡರ್ಸ್‌ ಪ್ರಾಯೋಜಕತ್ವದಲ್ಲಿ ‘ವಾರ್ತಾಭಾರತಿ ಡಾಟ್ ಇನ್’ ರಮಝಾನ್ ಪ್ರಯುಕ್ತ ಆಯೋಜಿಸಿದ್ದ ‘ನಿಮ್ಮ ರಮಝಾನ್ ಅನುಭವಗಳನ್ನು ಹಂಚಿಕೊಳ್ಳಿ’ ಸ್ಪರ್ಧೆಯಲ್ಲಿ ವಿಜೇತರಿಗೆ ‘ವಾರ್ತಾಭಾರತಿ’ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾದ ಸರಳ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಿತು.

ಸ್ಪರ್ಧಾ ವಿಜೇತರಾದ ಕಲಾವಿದ ಹಾಗೂ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಮಂಜು ವಿಟ್ಲ, ಉಡುಪಿಯ ಉಪನ್ಯಾಸಕಿ ಭಾಗ್ಯಶ್ರೀ ಐತಾಳ್ ಮತ್ತು ಬಂಟ್ವಾಳದ ಉಪನ್ಯಾಸಕ ಅಬ್ದುರ್ರಝಾಕ್ ಅನಂತಾಡಿ ಅವರಿಗೆ ಸ್ಮರಣಿಕೆ, ಪ್ರಮಾಣ ಪತ್ರ ಹಾಗು ನಗದು ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ರವೂಫ್ ಪುತ್ತಿಗೆ, ರಮಝಾನ್ ತಿಂಗಳ ಉಪವಾಸ ಆಚರಣೆಯ ಬಗ್ಗೆ ಮುಸ್ಲಿಮೇತರಲ್ಲಿ ಗೌರವ ಭಾವನೆ ಇದೆ. ಇತರ ಧರ್ಮೀಯರು ತೋರುವ ಗೌರವ ಮತ್ತು ಆತ್ಮೀಯತೆಯನ್ನು ಉಳಿಸಿಕೊಂಡು ಪರಸ್ಪರ ಸೌಹಾರ್ದದೊಂದಿಗೆ ಬದುಕುವ ವಾತಾವರಣ ನಿರ್ಮಾಣವಾಗಲಿ ಎಂದರು.

ಪಿ.ಎಂ.ಎ.ರಝಾಕ್ ಮಾತನಾಡಿ, ಯಾವ ಸರಕಾರಗಳು ಅಸ್ತಿತ್ವಕ್ಕೆ ಬಂದರೂ ನಿಸ್ಪಕ್ಷಪಾತವಾಗಿ ಸತ್ಯ ಸಂಗತಿಯನ್ನು ಪತ್ರಿಕೆಗಳು ಜನರಿಗೆ ತಿಳಿಸುವುದು ಮುಖ್ಯ. ಈ ಕೆಲಸವನ್ನು ವಾರ್ತಾಭಾರತಿ ಮಾಡುತ್ತಿದೆ ಎಂದರು.

ಮನಪಾದ ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್ ಮಾತನಾಡಿ ಶುಭಹಾರೈಸಿದರು.

'ವಾರ್ತಾಭಾರತಿ' ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಪುತ್ತಿಗೆ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕ ಫತೇ ಮುಹಮ್ಮದ್ ಪುತ್ತಿಗೆ, ರಯ್ಯಾನ್ ಬಾಶು ಪುತ್ತಿಗೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ಪರ್ಧಾ ವಿಜೇರ್ತರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

‘ಮಾನವೀಯತೆಯ ಸೇತುವೆ ಕಟ್ಟೋಣ’ ಈ ಸಂದರ್ಭದಲ್ಲಿ ಅನಿಸಿಕೆ ವ್ಯಕ್ತಪಡಿಸಿದ ಮಂಜು ವಿಟ್ಲ, ಜಾತಿ, ಧರ್ಮಗಳ ಹೆಸರಿನಲ್ಲಿ ನಿರ್ಮಾಣವಾಗಿರುವ ಗೋಡೆಗಳನ್ನು ಕೆಡವಿ ಮಾನವೀಯತೆಯ ಸೇತುವೆಯನ್ನು ಕಟ್ಟೋಣ ಎಂದರು. ಮನುಷ್ಯರ ನಡುವೆ ಬೇರೆ ಬೇರೆ ಕಾರಣಗಳಿಗಾಗಿ ಗೋಡೆಗಳು ನಿರ್ಮಾಣವಾಗಿರುವುದರಿಂದ 50 ವರ್ಷಗಳ ಹಿಂದೆ ಸಮಾಜದಲ್ಲಿ ಕಂಡುಬರುತ್ತಿದ್ದ ಸಹೋದರತೆ ಮತ್ತು ಸಾಮರಸ್ಯವು ಇಂದು ಕಾಣ ಸಿಗುತ್ತಿಲ್ಲ. ‘ವಾರ್ತಾಭಾರತಿ’ಯು ಸತ್ಯ ಸಂಗತಿಗಳನ್ನು ತಿಳಿಸುವ ಮೂಲಕ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಜನರ ಮನಸ್ಸುಗಳ ನಡುವೆ ಸೇತುವೆ ನಿರ್ಮಿಸುವ ಕೆಲಸ ಮಾಡೋಣ ಎಂದರು.

ಭಾಗ್ಯಶ್ರೀ ಐತಾಳ್ ಮಾತನಾಡಿ, ಎಲ್ಲಾ ಧರ್ಮಿಯರು ಆಚರಿಸುವ ಉಪವಾಸಗಳು ಮಾನವೀಯತೆ ಮತ್ತು ಸಹೋದರತೆಗೆ ಒತ್ತು ನೀಡಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ ನೀಡೋಣ ಎಂದು ಹೇಳಿ ‘ವಾರ್ತಾಭಾರತಿ’ ಇನ್ನೂ ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.

ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ, ಬಡತನವೇ ನನ್ನ ಪಾಲಿನ ವರ. ಅದೇ ನನ್ನನ್ನು ಇಲ್ಲಿಯವರೆಗೆ ಬೆಳೆಸಿದೆ. ಈಗ ಬೇರೆ ಬೇರೆ ಧರ್ಮಗಳ ವಿದ್ಯಾರ್ಥಿಗಳು ಅನ್ಯೋನ್ಯರಾಗಿ ಒಟ್ಟಿಗೆ ಕಲಿಯುವುದನ್ನು ನೋಡುವ ಭಾಗ್ಯ ನನ್ನದಾಗಿದೆ ಎಂದರು.

ವಾರ್ತಾಭಾರತಿಯ ಸುದ್ದಿ ಸಂಪಾದಕ ಬಿ.ಎಂ.ಬಶೀರ್ ಹಾಗು ಉಪಸಂಪಾದಕ ಪ್ರವೀಣ್ ರೈ ಕುಕ್ಕುವಳ್ಳಿ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಮುಹಮ್ಮದ್ ಮುಸ್ಲಿಮ್ ಕೊಪ್ಪ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ‘ವಾರ್ತಾಭಾರತಿ’ ಮಂಗಳೂರು ಬ್ಯೂರೋ ಮುಖ್ಯಸ್ಥ ಬಿ.ಎನ್.ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು. ಶರೀಫ್ ಕೋಡಿಜಾಲ್ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News