ಭಾರತದ ನಿರ್ಮಲಾ ಕಳಪೆ ಪ್ರದರ್ಶನ

Update: 2017-08-08 18:34 GMT

ಲಂಡನ್, ಆ.8: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಮಹಿಳೆಯರ 400 ಮೀ. ಓಟದ ಸೆಮಿಫೈನಲ್‌ನಲ್ಲಿ ಭಾಗವಹಿಸಿದ ಭಾರತದ ಅಥ್ಲೀಟ್ ನಿರ್ಮಲಾ ಶರೋನ್ ಕಳಪೆ ಪ್ರದರ್ಶನ ನೀಡಿದರು.

22ರ ಹರೆಯದ ನಿರ್ಮಲಾ 53.07 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಇದು ಆಕೆಯ ವೈಯಕ್ತಿಕ ಶ್ರೇಷ್ಠ ಪ್ರದರ್ಶನ(51.28 ಸೆ.)ಕ್ಕಿಂತಲೂ ಕಳಪೆ ಸಾಧನೆಯಾಗಿದೆ.

 ಸೋಮವಾರ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನ 2ನೆ ಹೀಟ್‌ನಲ್ಲಿ ನಿರ್ಮಲಾ ಏಳನೆ ಸ್ಥಾನ ಪಡೆದರು. ಒಟ್ಟು 24 ಸ್ಪರ್ಧಿಗಳ ಪೈಕಿ 22ನೆ ಸ್ಥಾನ ಪಡೆದಿದ್ದಾರೆ.

  ಮೂರು ಸೆಮಿಫೈನಲ್ ಹೀಟ್ಸ್‌ನಲ್ಲಿ ಅಗ್ರ ಸ್ಥಾನ ಪಡೆದ ತಲಾ ಇಬ್ಬರು ಅಥ್ಲೀಟ್‌ಗಳು, ಉಳಿದ ಓಟಗಾರರಲ್ಲಿ ವೇಗವಾಗಿ ಗುರಿ ತಲುಪಿದ ಇಬ್ಬರು ಅಥ್ಲೀಟ್‌ಗಳು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

 50.08 ಸೆಕೆಂಡ್‌ನಲ್ಲಿ ಗುರಿ ತಲುಪಿದ ಬಹರೈನ್‌ನ ಸಲ್ವಾ ಈದ್ ನಾಸಿರ್ ಮೊದಲ ಸ್ಥಾನ ಪಡೆದು ಫೈನಲ್ ತಲುಪಿದರು. ಹಾಲಿ ಚಾಂಪಿಯನ್ ಹಾಗೂ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಅಲಿಸನ್ ಫೆಲಿಕ್ಸ್ 50.12 ಸೆಕೆಂಡ್‌ನಲ್ಲಿ ಎರಡನೆ ಅತ್ಯಂತ ವೇಗದಲ್ಲಿ ಗುರಿ ತಲುಪಿದರು.

ಹರ್ಯಾಣದ ಓಟಗಾರ್ತಿ ನಿರ್ಮಲಾ ಫೈನಲ್‌ಗೆ ತಲುಪುವ ಸಾಧ್ಯತೆ ಕಡಿಮೆಯಿದ್ದರೂ ವೈಯಕ್ತಿಕ ಶ್ರೇಷ್ಠ ಪ್ರದರ್ಶನವನ್ನು ಉತ್ತಮ ಪಡಿಸಿಕೊಳ್ಳಲು ಯತ್ನಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ವಿಶ್ವ ಚಾಂಪಿಯನ್‌ಶಿಪ್‌ನ ಹೀಟ್ಸ್‌ನಲ್ಲಿ ತಾನು ನೀಡಿರುವ ಉತ್ತಮ ಪ್ರದರ್ಶನ(52.01 ಸೆ.) ಸನಿಹವೂ ಸುಳಿಯಲಿಲ್ಲ. ನಿರ್ಮಲಾ ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 52.01 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದ್ದರು.

ನಿರ್ಮಲಾ ಹೀಟ್ಸ್‌ನಲ್ಲಿ ನಾಲ್ಕನೆ ಸ್ಥಾನ ಪಡೆಯುವುದರೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

 ‘‘ಇಂದು ನಾನು ಉತ್ತಮ ಪ್ರದರ್ಶನ ನೀಡಲಿಲ್ಲ. ಮೊನ್ನೆಯ ಪ್ರದರ್ಶನ ಖುಷಿ ನೀಡಿತ್ತು. ಮೊನ್ನೆಯ ಪ್ರದರ್ಶನದ ಬಳಿಕ ನಾನು ಸಂಪೂರ್ಣ ಚೇತರಿಸಿಕೊಂಡಿಲ್ಲ. ಇಲ್ಲಿನ ಆಹಾರ ಸೇವನೆಯಿಂದ ಸಮಸ್ಯೆ ಎದುರಿಸಿದ್ದೆ. ನನಗೆ ವೈಯಕ್ತಿಕ ಕೋಚ್ ಇಲ್ಲ. ವೈಯಕ್ತಿಕ ಪ್ರದರ್ಶನವನ್ನು ಉತ್ತಮಪಡಿಸಬೇಕೆಂಬ ಗುರಿ ಹಾಕಿಕೊಂಡಿದ್ದೆ. ಆದರೆ ವೈಯಕ್ತಿಕ ಕೋಚ್ ಇದ್ದರೆ ಇದು ಸಾಧ್ಯ. ಇಂತಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಅಥ್ಲೀಟ್‌ಗೆ ಕೋಚ್‌ರ ಅಗತ್ಯ ತುಂಬಾ ಇರುತ್ತದೆ. ವೈಯಕ್ತಿಕ ಕೋಚ್ ಇಲ್ಲದಿದ್ದರೆ ತುಂಬಾ ಕಷ್ಟ’’ ಎಂದು ರೇಸ್‌ನ ಬಳಿಕ ನಿರ್ಮಲಾ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News