2022ರ ವೇಳೆಗೆ ಬಡತನ ಮತ್ತು ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿ ಕರೆ

Update: 2017-08-09 13:27 GMT

ಹೊಸದಿಲ್ಲಿ,ಆ.9: ಮಹಾತ್ಮಾ ಗಾಂಧಿಯವರು 75 ವರ್ಷಗಳ ಹಿಂದೆ ಇದೇ ದಿನ ಚಲೇಜಾವ್ ಚಳವಳಿಯನ್ನು ಆರಂಭಿಸಿದಾಗಿನ ಸ್ಫೂರ್ತಿಯೊಂದಿಗೆ 2022ರ ವೇಳೆಗೆ ಭಾರತವನ್ನು ಬಡತನ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಿಸಲು ಸಾಮೂಹಿಕ ಶಪಥ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕರೆ ನೀಡಿದರು.

‘ಭಾರತ ಬಿಟ್ಟು ತೊಲಗಿ’ ಆಂದೋಲನದ ವರ್ಷಾಚರಣೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಈ ಆಂದೋಲನವು ಭಾರತದ ಬಲವಾದ ಇಚ್ಛಾಶಕ್ತಿಯ ಬಗ್ಗೆ ಇಡೀ ವಿಶ್ವಕ್ಕೇ ಅರಿವು ಮೂಡಿಸಿತ್ತು ಎಂದರು.

ಗಾಂಧೀಜಿಯವರ ‘ಮಾಡು ಇಲ್ಲವೇ ಮಡಿ’ ಕರೆಯು ಭಾರತದ ಸ್ವಾತಂತ್ರ ಹೋರಾಟಕ್ಕೆ ಸಂಪೂರ್ಣ ಹೊಸರೂಪವನ್ನು ನೀಡಿತ್ತು ಮತ್ತು ದೇಶದಲ್ಲಿ ಹಿಂದೆಂದೂ ಕಂಡಿರದ ಭಾವನೆಗಳನ್ನು ಬಡಿದೆಬ್ಬಿಸಿತ್ತು ಮತ್ತು ಇದು ಅಂತಿಮವಾಗಿ ಭಾರತಕ್ಕೆ ಸ್ವಾತಂತ್ರವನ್ನು ತಂದು ಕೊಟ್ಟಿತ್ತು ಎಂದರು.

ಸದಾ ಅಹಿಂಸೆಯನ್ನೇ ಪ್ರತಿಪಾದಿಸಿದ್ದ ನಾಯಕ ಗಾಂಧೀಜಿಯವರು ‘ಮಾಡು ಇಲ್ಲವೇ ಮಡಿ’ ಎಂಬ ಕರೆಯನ್ನು ನೀಡಿದಾಗ ಅದು ಇಡೀ ದೇಶವನ್ನೇ ಅಚ್ಚರಿಯಲ್ಲಿ ಕೆಡವಿತ್ತು. ನಾವು ನಮ್ಮನ್ನು ಸ್ವತಂತ್ರ ಪ್ರಜೆಗಳೆಂದು ಪರಿಗಣಿಸಬೇಕೆಂದು ಅವರು ಪ್ರತಿಯೊಬ್ಬರಿಗೂ ಹೇಳಿದ್ದರು ಎಂದು ಮೋದಿ ನುಡಿದರು.

ಬಡತನ, ಅಪೌಷ್ಟಿಕತೆ,ಶಿಕ್ಷಣ ಮತ್ತು ಆರೋಗ್ಯಸೇವೆಯ ಕೊರತೆ ಇವು ಇಂದು ದೇಶವು ಎದುರಿಸುತ್ತಿರುವ ಬೃಹತ್ ಸವಾಲುಗಳಾಗಿವೆ ಎಂದ ಅವರು, ಈ ನಿಟ್ಟಿನಲ್ಲಿ ಧನಾತ್ಮಕ ಬದಲಾವಣೆಯೊಂದನ್ನು ನಾವು ತರಬೇಕಾಗಿದೆ. ಇಂದು ದೇಶದಲ್ಲಿನ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೆಸೆಯಲು 1942ರಲ್ಲಿ ಗಾಂಧೀಜಿಯವರು ನೀಡಿದ್ದಂಥ ಕರೆ ಮತ್ತು ದೃಢನಿರ್ಧಾರ ಅಗತ್ಯವಾಗಿವೆ. ದೇಶದ ಸಾಮೂಹಿಕ ಪ್ರಜ್ಞೆಯ ದೃಢನಿರ್ಧಾರದೊಂದಿಗೆ ಬಹಳಷ್ಟನ್ನು ಸಾಧಿಸಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News