×
Ad

​ಆಸ್ಪತ್ರೆಯಲ್ಲಿ ಮೃತ್ಯು: ವೈದ್ಯರ ನಿರ್ಲಕ್ಷ ಆರೋಪ

Update: 2017-08-09 21:09 IST

ಕುಂದಾಪುರ, ಆ. 9: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ನಡೆಸಿದ ಶಸ್ತ್ರ ಚಿಕಿತ್ಸೆಯ ಬಳಿಕ ಮೃತಪಟ್ಟಿದ್ದು, ಮೃತರ ಮನೆಯವರು ವೈದ್ಯರ ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ ಎಂಬುದಾಗಿ ಆರೋಪಿಸಿದ್ದಾರೆ.

ಮೃತರನ್ನು ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ನಾಗ ಎಂಬವರ ಪುತ್ರ ಸಂಜೀವ ಹೊಸಾಡು (40) ಎಂದು ಗುರುತಿಸಲಾಗಿದೆ. ಇವರು ಹರ್ನಿಯ ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆ.7ರಂದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ.8ರಂದು ಮಧ್ಯಾಹ್ನ 12:45 ಗಂಟೆಗೆ ಆಸ್ಪತ್ರೆಯ ವೈದ್ಯರು ಸಂಜೀವ ಹೊಸಾಡುರವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಆ ಬಳಿಕ ಸಂಜೀವ ತನ್ನ ಪತ್ನಿಯೊಂದಿಗೆ ಮಾತನಾಡಿದ್ದರೆನ್ನಲಾಗಿದೆ.

ತದನಂತರ ಸಂಜೆ 5:30ಕ್ಕೆ ಸಂಜೀವ ಹೊಸಾಡು ಉಸಿರಾಟದ ತೊಂದರೆಗೆ ಒಳಗಾದರು. ಕೂಡಲೇ ವೈದ್ಯರು ಔಷದೋಪಚಾರ ಮಾಡಿದರು. ಆದರೆ ಸಂಜೆ 7 ಗಂಟೆಗೆ ಸುಮಾರಿಗೆ ಸಂಜೀವ ಹೊಸಾಡು ಮೃತಪಟ್ಟರು ಎಂದು ಕುಂದಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಸಂಜೀವ ವೈದ್ಯರ ನಿರ್ಲಕ್ಷದಿಂದ ಮೃತಪಟ್ಟಿದ್ದಾರೆಂದು ಮನೆಯವರು ಹಾಗೂ ಇತರ ಸಂಘಟನೆಗಳು ಆರೋಪಿಸಿವೆ. ಈ ನಿಟ್ಟಿನಲ್ಲಿ ಮೃತರ ಮರಣೋತ್ತರ ಪರೀಕ್ಷೆ ಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News