ಸಾಯುತ್ತಿರುವ ಭಾಷೆಗಳೇ ಕವಿಯ ಮುಂದಿರುವ ಸವಾಲು: ವೈದೇಹಿ
ಉಡುಪಿ, ಆ.9: ಕಾವ್ಯ ನಿಂತಿರುವುದು ಭಾಷೆಯ ಮೇಲೆ. ಆದರೆ ಇಂದು ಭಾಷೆಗಳೇ ಸಾಯುತ್ತಿವೆ. ಇಂತಹ ಸಂದರ್ಭದಲ್ಲಿ ಕಾವ್ಯವನ್ನು ಕಟ್ಟಿಕೊಳ್ಳುವುದು ಹೇಗೆ ಎಂಬುದು ಕವಿ ಮುಂದಿರುವ ದೊಡ್ಡ ಸವಾಲು ಆಗಿದೆ. ಧ್ವೇಷದ ಭಾಷೆ ಹೆಚ್ಚುತ್ತ ಪ್ರೀತಿಯ ಭಾಷೆ ಕಡಿಮೆ ಆಗುತ್ತಿದೆ ಎಂದು ಹಿರಿಯ ಲೇಖಕಿ ವೈದೇಹಿ ಹೇಳಿದ್ದಾರೆ.
ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ವತಿಯಿಂದ ಬುಧವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ‘ಜೀನ್ಸ್ ತೊಟ್ಟ ದೇವರು’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಅಭಿನಂದನಾ ಭಾಷಣ ಮಾಡಿದರು.
ಒಂದು ಕಡೆ ಭಾಷೆ ಸಾಯುವ ಆತಂಕ ಮೂಡಿದರೆ, ಇನ್ನೊಂದು ಕಡೆ ಹೊಸ ಹೊಸ ಯುವ ಲೇಖಕರು ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇವರೇ ನಮ್ಮ ಮುಂದಿನ ಭರವಸೆಗಳಾಗಿದ್ದಾರೆ. ಕನ್ನಡ ಉಳಿಸಿ, ಬೆಳೆಸಿ ಎಂದು ಹೇಳುವ ಸ್ಥಿತಿ ಬಂದಿದೆ. ಆದರೆ ಕನ್ನಡ ಭಾಷೆಯಲ್ಲಿ ನಮ್ಮ ಒಳಮನಸ್ಸಿನ ಭಾವನೆಗಳನ್ನು ಚೆನ್ನಾಗಿ ಹೇಳಲು ಸಾಧ್ಯ ಎಂದರು.
ಪ್ರಶಸ್ತಿಗಾಗಿ ಪುಸ್ತಕ ಬರೆಯಬಾರದು. ಆದರೆ ಪ್ರಶಸ್ತಿಯು ಲೇಖಕನನ್ನು ಎಚ್ಚರ ಗೊಳಿಸುವ ಕೆಲಸ ಮಾಡುತ್ತದೆ. ಬರಹಗಾರರಲ್ಲಿ ಸೊಕ್ಕು ಎಂಬುದು ಬಂದರೆ ಒಂದು ಸಾಲು ಕೂಡ ಕಟ್ಟಲು ಆಗಲ್ಲ. ಇಂದು ಎರಡು ಪುಸ್ತಕ ಬರೆದವರಲ್ಲಿ ದೊಡ್ಡ ಬರಹಗಾರರೆಂಬ ಸೊಕ್ಕು ಮೂಡುತ್ತಿದೆ. ಮನಸ್ಸಿನಲ್ಲಿ ಇರುವುದನ್ನು ಬರೆಯುವುದೇ ಬರವಣಿಗೆ. ಅದರಲ್ಲಿ ಸೊಕ್ಕು ಬಂದರೆ ಆ ಬರವಣಿಗೆ ಅಲ್ಲಿಗೆ ನಿಂತು ಹೋಗುತ್ತದೆ ಎಂದು ಅವರು ಹೇಳಿದರು.
ಕಾವ್ಯ ಕಡಮೆ ನಾಗರಕಟ್ಟೆ ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ಬಳಿಕ ಮಾತನಾಡಿದ ಕಾವ್ಯ, ನಾವು ನಮ್ಮ ಸುತ್ತಲೂ ಗೋಡೆಯನ್ನು ಕಟ್ಟಿಕೊಂಡು ಬಂಧಿಗಳಾಗಿದ್ದೇವೆ. ಬಂಧಿಗಳಾಗಿ ರುವ ನಮ್ಮ ಧ್ವನಿ ಹಾಗೂ ಸ್ವತಂತ್ರವಾಗಿ ತಿರುಗಾಡುವವರ ಧ್ವನಿಯು ಸಾಕಷ್ಟು ಭಿನ್ನವಾಗಿದೆ. ಮಾನವ ಚರಿತ್ರೆಯಲ್ಲಿ ಮಹಿಳೆ, ಅಸಹಾಯಕರ ಧ್ವನಿ ಇಲ್ಲವಾ ಗಿದೆ. ಈ ಅಪೂರ್ಣವಾದ ಚರಿತ್ರೆಯನ್ನು ಪೂರ್ಣಗೊಳಿಸುವ ಪ್ರಯತ್ನ ಮಾಡ ಬೇಕಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕಿ ಡಾ.ಮಹೇಶ್ವರಿ ಯು. ‘ಕಡೆಂಗೋಡ್ಲು ಕಾವ್ಯದ ದಾರಿ’ ಕುರಿತು ವಿಶೇಷ ಉಪನ್ಯಾಸ ನೀಡಿ, ಕಡೆಂಗೋಡ್ಲು ಶಂಕರ ಭಟ್ ಅವರ ಕಾವ್ಯ ಗಳ ಬಗ್ಗೆ ಈವರೆಗೆ ಯಾವುದೇ ಅಧ್ಯಯನ ನಡೆದಿಲ್ಲ. ಆ ಕಾರ್ಯವನ್ನು ಅಗತ್ಯ ವಾಗಿ ಮಾಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮಿನಾರಾಯಣ ಆಳ್ವ ವಹಿಸಿದ್ದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕುಸುಮಾ ಕಾಮತ್, ಡಾ.ಕೆ.ಎಸ್.ಭಟ್ ಮಣಿಪಾಲ ಉಪಸ್ಥಿತರಿದ್ದರು.
ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಸಂಯೋಜನಾಧಿಕಾರಿ ಡಾ.ಅಶೋಕ್ ಆಳ್ವ ವಂದಿಸಿ ದರು. ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.