ಪ್ರವೀಣ್‌ರ ಮಂಪರು ಪರೀಕ್ಷೆ ನಡೆಯಲಿ: ರಾಮ್‌ಸೇನಾ
ಉಡುಪಿ, ಆ.9: ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಆಳ್ವಾಸ್‌ನ ವಿದ್ಯಾರ್ಥಿನಿ ಕಾವ್ಯಾಳ ಸಾವಿನ ಕುರಿತು ತೀವ್ರವಾದ ತನಿಖೆ ನಡೆಯಬೇಕು. ಆಕೆಯ ದೈಹಿಕ ಶಿಕ್ಷಕರಾಗಿರುವ ಪ್ರವೀಣ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ರಾಮ್‌ಸೇನಾ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಕರ್ಜೆ ಒತ್ತಾಯಿಸಿದ್ದಾರೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯದಲ್ಲಿ ಹಿಂದುಗಳನ್ನು ಜಾತಿಗಳಾಗಿ ಒಡೆಯುವ ಷಡ್ಯಂತ್ರ ನಡೆಯುತಿದ್ದು, ಇದನ್ನು ಎಲ್ಲರೂ ಖಂಡಿಸಬೇಕು. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಕಾಲೇಜು ಆಡಳಿತ ಮಂಡಳಿ ಸಹಕರಿಸಬೇಕು ಎಂದವರು ಹೇಳಿದರು.
ರಾಮ ಸೇನಾ ಕರ್ನಾಟಕ ಹಾಗೂ ಶ್ರೀರಾಮ್‌ಸೇನೆ ಎಂಬುದು ಎರಡು ಬೇರೆ ಬೇರೆ ಸಂಘಟನೆಗಳಾಗಿದ್ದು, ರಾಮ್ ಸೇನಾ ಕರ್ನಾಟಕ ಮಂಗಳೂರಿನ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಆರು ವರ್ಷಗಳ ಹಿಂದೆ ಹುಟ್ಟಿ 22 ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಸಂಘಟನೆ ಎಂದರು.
ರಾಮ್‌ಸೇನಾ ಕರ್ನಾಟಕದ ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ರಮೇಶ್ ಕಲ್ಲೊಟ್ಟೆ ಜಿಲ್ಲಾ ವಕ್ತಾರರಾಗಿ, ಶಂಕರ್‌ಪುತ್ರನ್ ಕೋಟ ಅಧ್ಯಕ್ಷ, ಯತೀಶ್ ಸಾಲ್ಯಾನ್ ಉಪಾಧ್ಯಕ್ಷ, ಅನುಪ್ ಕುಮಾರ್ ಪ್ರದಾನ ಕಾರ್ಯದರ್ಶಿ, ದೀಪಕ್ ಮೂಡುಬೆಳ್ಳೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಸಂಜಯ್ ನಾಯಕ್ ಉಡುಪಿ ನಗರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಮೇಶ ಕಲ್ಲೊಟ್ಟೆ, ಯತೀಶ್ ಸಾಲ್ಯಾನ್, ಸಂದೇಶ ಶೆಟ್ಟಿ ಬೈಲೂರು, ಶೈಲೇಶ್ ಕುಂದರ್ ಕಣಜಾರು, ಮಂಜುನಾಥ ಬೈಲೂರು ಉಪಸ್ಥಿತರಿದ್ದರು.