ರಸ್ತೆ ದುರಸ್ಥಿಗೊಳಿಸದೆ ಜನಪ್ರತಿನಿಧಿಗಳಿಂದ ವಂಚನೆ: ಹರೂನ್ ರಶೀದ್
ಬಂಟ್ವಾಳ, ಆ. 9: ಸಂಚಾರಕ್ಕೆ ಅಯೋಗ್ಯವಾಗಿರುವ ಬಿ.ಸಿ.ರೋಡ್ ಸರ್ವೀಸ್ ರಸ್ತೆಯನ್ನು ದುರಸ್ಥಿಗೊಳಿಸದೆ ಇಲ್ಲಿನ ಜನಪ್ರತಿನಿಧಿಗಳು ಜನ ಸಾಮಾನ್ಯರನ್ನು ವಂಚಿಸುತ್ತಿದ್ದಾರೆ ಎಂದು ಜೆಡಿಎಸ್ ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಹರೂನ್ ರಶೀದ್ ತಿಳಿಸಿದ್ದಾರೆ.
ಹಲವು ಸಮಯದಿಂದ ಹದೆಗೆಟ್ಟಿರುವ ಬಿ.ಸಿ.ರೋಡ್ ಸರ್ವೀಸ್ ರಸ್ತೆ ವಾಹನಗಳ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿದೆ. ಈ ರಸ್ತೆಯಲ್ಲಿ ನಡೆದಾಡಲು ಸಾರ್ವಜನಿಕರು ಕೂಡಾ ಪರದಾಡುತ್ತಿದ್ದಾರೆ. ಆದರೆ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ, ವಿಜಯೋತ್ಸವ ಆಚರಿಸುವ ರಾಜಕೀಯ ಪಕ್ಷಗಳ ನಾಯಕರು ತಮ್ಮದೇ ಸರಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಬಿ.ಸಿ.ರೋಡ್ ಸರ್ವೀಸ್ ರಸ್ತೆಯನ್ನು ದುರಸ್ಥಿಗೊಳಿಸುವ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಪತ್ರಿಕಾ ಪ್ರಕಟನೆಯಲ್ಲಿ ದೂರಿದ್ದಾರೆ.
ಬಿ.ಸಿ.ರೋಡ್ ಸರ್ವೀಸ್ ರಸ್ತೆಯನ್ನು ದುರಸ್ಥಿಗೊಳಸದೆ ಇದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿರುವ ಅವರು, ತಾಲೂಕಿನಲ್ಲಿ ನಡೆದ ಕೋಮು ಅಹಿತಕರ ಘಟನೆಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸುತ್ತಿವೆ. ಪ್ರತಿಭಟನೆ ಮತ್ತು ವಿಜಯೋತ್ಸವಕ್ಕೆ ಅನುಮತಿ ನೀಡುವ ಪೊಲೀಸ್ ಇಲಾಖೆ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ’ಶಾಂತಿಗಾಗಿ ಪಾದಯಾತ್ರೆ’ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ ಎಂದು ಅವರು ಹೇಳಿದ್ದಾರೆ.