ಸೌತ್ ಕೆನರಾ ಫೋಟೋಗ್ರಾಫ್‌ರ್ಸ್ ಅಸೋಸಿಯೇಶನ್ ಬಂಟ್ವಾಳ ವತಿಯಿಂದ ’ತುಳುನಾಡ ಗೊಬ್ಬಲು’
ಬಂಟ್ವಾಳ, ಆ. 9: ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ಛಾಯಾ ಚಿತ್ರಗಾಹಕರ ಸಂಘ ಕ್ರೀಡೆಯ ಮೂಲಕ ಸಂಸ್ಕೃತಿಯನ್ನು ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿದೆ. ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಕೆಲಸ ಛಾಯಾ ಚಿತ್ರಗಾಹಕರ ಸಂಘದ ಸದಸ್ಯರಿಂದ ನಡೆಯುತ್ತದೆ ಎಂದರೆ ನಿಜಕ್ಕೂ ಶ್ಲಾಘನೀಯ ಕೆಲಸ ಎಂದು ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಹೇಳಿದರು.
ಸೌತ್ ಕೆನರಾ ಫೋಟೋಗ್ರಾಫ್‌ರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದ ವತಿಯಿಂದ ಒಡ್ಡೂರು ಫಾರ್ಮ ಹೌಸ್‌ನಲ್ಲಿ ನೆಡದ ’ತುಳುನಾಡ ಗೊಬ್ಬಲು’ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ವೃತ್ತಿಯ ಜೊತೆಜೊತೆಯಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡ ಸಂಘ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎನ್ನುವುದಕ್ಕೆ ಇಂತಹ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ. ಕ್ರೀಡೆಯಿಂದ ಮಾನಸಿಕ, ಬೌದ್ದಿಕ ಬೆಳವಣಿಗೆ ಮಾತ್ರವಲ್ಲದೆ ಸಾಮಾಜಿಕ ಪರಿವರ್ತನೆ ಕೂಡಾ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಸದಸ್ಯ ದೇವದಾಸ ಶೆಟ್ಟಿ, ಮಂಗಳೂರು ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಆನಂದ, ಕಾರ್ಯದರ್ಶಿ ಮಧು ಮಂಗಳೂರು, ಜಿಲ್ಲಾ ಕ್ರೀಡಾಕಾರ್ಯದರ್ಶಿ ಪ್ರವೀಣ ಕೊರೆಯ, ಜಿಲ್ಲಾ ಉಪಾಧ್ಯಕ್ಷ ವಿಲ್ಸನ್ ಗೊನ್ಸಾಲಿಸ್, ಜಿಲ್ಲಾ ಕೋಶಾಧಿಕಾರಿ ದಯಾನಂದ, ಬಂಟ್ವಾಳ ವಲಯ ಅಧ್ಯಕ್ಷ ಸುಕುಮಾರ್, ವಲಯ ಕಾರ್ಯದರ್ಶಿ ಹರೀಶ್ ಕುಂದರ್, ಕ್ರೀಡಾ ಕಾರ್ಯದರ್ಶಿಗಳಾದ ಹರೀಶ್ ನಾಟಿ, ಬಾಸ್ಕರ್ ಬಂಟ್ವಾಳ, ವಲಯ ಕೋಶಾಧಿಕಾರಿ ರವಿ ಕಲ್ಪನೆ ಮತ್ತು ಸದಸ್ಯರು ಉಪಸ್ಥಿತರಿದ್ದರು.