ಬಂಟ್ವಾಳ ತಾಲೂಕು ಪಂಚಾಯತ್ ಸಭೆ
ಬಂಟ್ವಾಳ, ಆ. 9: ಗರ್ಭಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೆ ಬಂದು ಪೌಷ್ಠಿಕಾಂಶವನ್ನು ಸೇವಿಸುವ ದೆಸೆಯಲ್ಲಿ ಅಕ್ಟೋಬರ್ 2ರಿಂದ ಸರಕಾರ ಜಾರಿಗೊಳಿಸಲಿರುವ ‘ಮಾತೃಪೂರ್ಣ’ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾರ್ಪಡಿಸಲು ಸರಕಾರದ ಗಮನ ಸೆಳೆಯಲಾಗುವುದು ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಐವಾನ್ ಡಿಸೋಜ ಬುಧವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್‌ನ ಸಭೆಯಲ್ಲಿ ಭರವಸೆ ನೀಡಿದ್ದಾರೆ.
ಯೋಜನೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ವಿಟ್ಲ ಸಿಡಿಪಿಒ ಸುಧಾಜೋಶಿ, ಮಾತೃಪೂರ್ಣ ಯೋಜನೆ ಜಾರಿಗೊಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಅಗತ್ಯವಿದೆ. ಇದನ್ನು ವಿರೋಧಿಸಿ ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿವೆ. ಅಲ್ಲದೆ ಪ್ರತಿಭಟನೆಗೂ ಸಿದ್ದತೆ ನಡೆಸುತ್ತಿದೆ ಎಂದು ಹೇಳಿದರು.
ಇದಕ್ಕೆ ದ್ವನಿ ಗೂಡಿಸಿದ ಸದಸ್ಯ ಪ್ರಭಾಕರ ಪ್ರಭು, ಸರಕಾರದ ಚಿಂತನೆ ಸರಿ ಇದೆ. ಆದರೆ ದ.ಕ. ಜಿಲ್ಲೆಯ ಮಟ್ಟಿಗೆ ಈ ವ್ಯವಸ್ಥೆ ಅನುಕೂಲಕರವಲ್ಲ. ಹಾಗಾಗಿ ಇಲ್ಲಿ ಹಿಂದಿನ ಪದ್ಧತಿಯನ್ನೇ ಮುಂದುವರಿಸುವುದು ಸೂಕ್ತ ಎಂದು ಸಲಹೆ ನೀಡಿದರಲ್ಲದೆ ಈ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಐವನ್ ಡಿಸೋಜ, ಮಾತೃಪೂರ್ಣ ಯೋಜನೆ ಮಲೆನಾಡು ಮತ್ತು ಹೊರ ಜಿಲ್ಲೆಗಳಿಗೆ ಅನುಕೂಲವಾಗಿದೆ. ದ.ಕ. ಜಿಲ್ಲೆಯಲ್ಲಿ ತೊಂದರೆಯಾಗುವ ಸಾಧ್ಯತೆಯಿರುವ ವಿಚಾರ ಮನಗಾಣುತ್ತಿದ್ದು, ಈ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರು, ಸರಕಾರದ ಗಮನಸೆಳೆದು ಮಾರ್ಪಾಟಿಗೆ ಪ್ರಯತ್ನಿಸಲಾಗುವುದು ಎಂದರು.
ಚರ್ಚೆಯ ಬಳಿಕ ದ.ಕ. ಜಿಲ್ಲೆಯಲ್ಲಿ ಬಾಣಂತಿಯರು, ಗರ್ಭಿಣಿಯರಿಗೆ ಈ ಹಿಂದಿನ ವ್ಯವಸ್ಥೆಯಲ್ಲೇ ಪೌಷ್ಠಿಕಾಂಶ ವಿತರಿಸುವುದೆಂದು ತೀರ್ಮಾನಿಸಿ ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಯಿತದಲ್ಲದೆ ಈ ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಲು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಯಿತು.
ಸರಕಾರಿ ಶಾಲೆ ಉಳಿಸಿ
ದಲಿತ ವರ್ಗಕ್ಕೆ ಸೇರಿದ ಬಾಲಕಿಯೊಬ್ಬಳನ್ನು ಮಿತ್ತನಡ್ಕ ಶಾಲೆಗೆ ಒಂದನೆ ತರಗತಿಗೆ ಸೇರಿಸಲು ವಯಸ್ಸು ಪೂರ್ತಿ 5 ವರ್ಷ 5 ತಿಂಗಳು ಆಗಲಿಲ್ಲ ಎಂದು ಹೇಳಿ ನಿರಾಕರಿಸಲಾಗಿದೆ. ಇದಕ್ಕೇನಾದರೂ ಪರಿಹಾರ ಸೂಚಿಸಿ. ಐದು ವರ್ಷ ಐದು ತಿಂಗಳು ಪೂರ್ತಿಯಾಗದೆ ಒಂದು ದಿನ ಕಡಿಮೆಯಾದರೂ ಶಾಲೆಯಿಂದ ಮಕ್ಕಳನ್ನು ಸೇರಿಸದೆ ವಾಪಾಸು ಕಳುಹಿಸಲಾಗುತ್ತಿದೆ. ಸರಕಾರದ ಈ ಆದೇಶದಿಂದ ನೂರಾರು ಮಕ್ಕಳು ಒಂದು ವರ್ಷವೇ ಕಲಿಕೆಯಿಂದ ವಂಚಿತರಾಗುತ್ತಾರೆಲ್ಲದೆ ಸರಕಾರಿ ಶಾಲೆಯನ್ನು ಮುಚ್ಚಬೇಕಾಗುವ ಸ್ಥಿತಿ ಇದೆ. ಹಾಗಾಗಿ ಪ್ರಸ್ತುತ ವರ್ಷವೇ ಈ ಆದೇಶ ರದ್ದುಪಡಿಸುವಂತೆ ಸರಕಾರಕ್ಕೆ ಒತ್ತಡ ಹಾಕಲು ಎಂದು ಸದಸ್ಯರಾದ ಉಸ್ಮಾನ್ ಕರೋಪಾಡಿ, ಆದಂ ಕುಂಞಿ, ರಮೇಶ್ ಕುಡ್ಮೇರ್ ವಿ.ಪ.ಮುಖ್ಯಸಚೇತಕ ಐವನ್ ಡಿಸೋಜರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉತ್ತರಿಸಿದ ಐವನ್, ವಿಧಾನಮಂಡಲದಲ್ಲಿ ಸಾಕಷ್ಟು ಚರ್ಚೆಗಳು ಶಾಲೆಗೆ ಸೇರುವ ವಿಚಾರದಲ್ಲಿ ನಡೆದಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೆತ್ತವರಿಗೆ ಈ ವಿಚಾರವನ್ನು ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ ಐದು ವರ್ಷ ಹತ್ತು ತಿಂಗಳಾದ ಮಗವನ್ನು ಶಾಲೆಗೆ ಸೇರಿಸುವಂತೆ ಆದೇಶ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೋಡಂದೂರು, ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಸದಸ್ಯರಾದ ಯಶವಂತ ಪೂಜಾರಿ, ಗಣೇಶ ಸುವರ್ಣ, ಕೆ.ಸಂಜೀವ ಪೂಜಾರಿ, ಪದ್ಮಶ್ರೀ ದುರ್ಗೇಶ್ ಶೆಟ್ಟಿ, ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು.
ತಾಪಂ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಕಾರ್ಯನಿರ್ವಾಹಕ ಅಧಿಕಾರಿ ಸಿಪ್ರಿಯಾನ್ ಮಿರಾಂದ, ತಹಶೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿದ್ದು ಚರ್ಚೆಯಲ್ಲಿ ಭಾಗವಹಿಸಿದರು.
ಅಧಿಕಾರಿಗಳಾದ ಪಿಡಬ್ಲ್ಯುಡಿ ಎಇಇ ಉಮೇಶ್ ಭಟ್, ಬಿಇಒ ಲೋಕೇಶ್ ಸಿ ಸಹಿತ ನಾನಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.