‘10-15 ವರ್ಷ ಪಾಠ ಮಾಡಿದ ನಮ್ಮನ್ನು ಕೈಬಿಡಬೇಡಿ’
ಉಡುಪಿ, ಆ.9: ಕಾಲೇಜು ಶಿಕ್ಷಣ ಇಲಾಖೆಯ ಹಠಾತ್ ಆದೇಶದಿಂದ ಕೆಲಸ ಕಳೆದುಕೊಂಡು ಬೀದಿಗೆ ಬಂದಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು, ಮಾನವೀಯತೆಯ ದೃಷ್ಟಿಯಿಂದ ಉಪನ್ಯಾಸಕ ಹುದ್ದೆಯಲ್ಲಿ ತಮ್ಮನ್ನು ಮುಂದುವರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಿದರು.
ಈ ಶೈಕ್ಷಣಿಕ ಋತುವಿನಲ್ಲಿ ನಾವು 15 ದಿನ ಕೆಲಸ ಮಾಡಿದ್ದೇವೆ. ಈಗ ಹಠಾತ್ತನೆ ಮನೆಗೆ ಹೋಗಿ ಎಂದರೆ ನಾವೇನು ಮಾಡಬೇಕು. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ ಅವರ ಭವಿಷ್ಯ ರೂಪಿಸುವ ನಾವು ಕಾಲೇಜು ಶಿಕ್ಷಣ ಇಲಾಖೆಯ ಆದೇಶದಿಂದ ಬೀದಿಗೆ ಬಂದಿದ್ದೇವೆ. ನಾವು ಎಲ್ಲರಂತೆ ಮನುಷ್ಯರು. ನಮಗೂ ಬದುಕಿದೆ, ಕುಟುಂಬವಿದೆ. ಹೀಗೆಲ್ಲಾ ನಮ್ಮ ಬದುಕಿನಲ್ಲಿ ಆಟವಾಡಬೇಡಿ. ಮನಸ್ಸಿಗೆ ಬಂದಂತೆ ಆದೇಶಿಸಿ ನಮ್ಮ ಕತ್ತು ಹಿಸುಕಬೇಡಿ ಎಂದು ಅವರು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಎದುರು ಅಳಲು ತೋಡಿಕೊಂಡರು.
ಕಾಲೇಜು ಪುನರಾರಂಭಗೊಂಡು ಎರಡು ತಿಂಗಳಾದರೂ, ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸರಕಾರ, ಕಾಲೇಜು ಶಿಕ್ಷಣ ಇಲಾಖೆಗೆ ಸ್ಪಷ್ಟತೆ ಯಿಲ್ಲ, ದೃಢ ನಿರ್ಧಾರ ತಳೆಯುತ್ತಿಲ್ಲ. ಸದ್ಯ ಪಾಠ ಮಾಡುತ್ತಿರುವವರನ್ನು ಮರು ನೇಮಕಗೊಳಿಸಿ ಪಾಠಪ್ರವಚನ ನಡೆಯುವಂತೆ ನೋಡಿಕೊಳ್ಳದೇ ದಿನಕ್ಕೊಂದು ಸುತ್ತೋಲೆ ಹೊಡಿಸುತ್ತಿದೆ ಎಂದವರು ದೂರಿದರು.
ಕಳೆದ ಜು.31ರಂದು ಮೂರನೇ ಸುತ್ತೋಲೆಯನ್ನು ಹೊರಡಿಸಿ 10, 15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ದುಡಿದ ಅನುಭವಿಗಳನ್ನು ಕೈಬಿಟ್ಟು ಐದು ವರ್ಷದ ಸೇವಾವಧಿಯನ್ನು ಪರಿಗಣಿಸುವಂತೆ ಆದೇಶಿಸಿದೆ. ಇದರಿಂದ ಇಷ್ಟು ವರ್ಷಗಳಿಂದ ಪ್ರಾಮಾಣಿಕವಾಗಿ ಪಾಠ ಹೇಳಿದ ನೂರಾರು ಅತಿಥಿ ಉಪನ್ಯಾ ಸಕರು ಬೀದಿಗೆ ಬಿದ್ದಿದ್ದಾರೆ. ಇದನ್ನು ಸರಕಾರಕ್ಕೆ ಮನದಟ್ಟು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರಾದ ಅನಿಲ್ ಕುಮಾರ್, ಶ್ರೀನಿವಾಸ ಕೆ., ನಾಗೇಶ್ ಬೈಂದೂರು, ರವಿಚಂದ್ರ ಬಾಯರಿ, ಶುಭಾಶ್ರೀ, ತೃಪ್ತಿ, ಸುನೀತಾ, ಭವ್ಯಶ್ರೀ ಉಪಸ್ಥಿತರಿದ್ದರು. ಜೈ ಕರ್ನಾಟಕ ರಕ್ಷಣಾವೇದಿಕೆಯ ರಮೇಶ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹಮದ್, ಸಿಐಟಿಯು ಬಾಲಕೃಷ್ಣ ಶೆಟ್ಟಿ, ಕವಿರಾಜ್ ಅವರೊಂದಿಗೆ ಭಾಗವಹಿಸಿದ್ದರು.
10 ಸಾವಿರ ರೂ. ಸಂಬಳಕ್ಕೆ ದುಡಿಯುತ್ತಿರುವ ನಮ್ಮನ್ನು ಕಾಲೇಜು ಶಿಕ್ಷಣ ಇಲಾಖೆ ಏಕಾಏಕಿ ಮನೆಗೆ ಹೋಗುವಂತೆ ಆದೇಶ ನೀಡಿದೆ. 15 ವರ್ಷಗಳಿಂದ ಪಾಠ ಮಾಡುತ್ತಿರುವ ನಾವು ಸದ್ಯ ಬೀದಿಗೆ ಬಂದಿದ್ದೇವೆ. ನಾವೇನೂ ಲಕ್ಷಾಂತರ ರೂ. ವೇತನ ಕೇಳುತ್ತಿಲ್ಲ. ಬದುಕುವ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ ಎಂದು ಮೊರೆ ಇಟ್ಟರೂ ಸ್ಪಂದಿಸದೇ ಇರುವುದು ಸರಕಾರದ ಕ್ರೌರ್ಯ ಮನೋಭಾವನೆಯನ್ನು ತೋರಿಸುತ್ತದೆ.
-ರಂಜಿತ್ ಕುಮಾರ್ ಶೆಟ್ಟಿ, ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ.
ಕಾಲೇಜು ಶಿಕ್ಷಣ ಇಲಾಖೆ 2, 3 ಸುತ್ತೋಲೆ ಹೊರಡಿಸಿ, ನಮ್ಮಿಂದ 15 ದಿನ ಕೆಲಸ ಮಾಡಿಸಿಕೊಂಡು ಈಗ ಮನೆಗೆ ಹೋಗಿ ಎನ್ನುತ್ತಿದೆ. ಕೂಲಿ ಕೆಲಸ ಮಾಡುವವರನ್ನು ಸಹ ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುವುದಿಲ್ಲ. ಆದರೆ ಹತ್ತಾರು ವರ್ಷಗಳಿಂದ ವಿದ್ಯಾದಾನ ಮಾಡಿದ ನಮ್ಮನ್ನು ಹೀಗೆ ನಿರ್ಧಯವಾಗಿ ಹೋಗಲು ಹೇಳುವುದರ ಹಿಂದಿರುವ ಉದ್ದೇಶ ಏನು?
-ಶ್ರೀಲತಾ, ಅತಿಥಿ ಉಪನ್ಯಾಸಕಿ.