×
Ad

ನಿವೃತ್ತರಿಗೆ ಭಾರತ ಉತ್ತಮ ಸ್ಥಳವಲ್ಲ: ಜಾಗತಿಕ ಸಮೀಕ್ಷೆಯ ವರದಿ

Update: 2017-08-09 22:39 IST

ಹೊಸದಿಲ್ಲಿ, ಆ.9: ನಿವೃತ್ತರಿಗೆ ಉತ್ತಮ ಸ್ಥಳ ಯಾವುದು ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಭಾರತ ಕಡೆಯ ಸ್ಥಾನ ಗಳಿಸಿದೆ. 43 ದೇಶಗಳನ್ನು ಸಮೀಕ್ಷೆಗೆ ಗುರಿಪಡಿಸಲಾಗಿತ್ತು. ಬ್ರಿಕ್ ದೇಶಗಳ ಪೈಕಿಯೂ ಭಾರತ ಕಡೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

   ಫ್ರೆಂಚ್ ಸಂಸ್ಥೆ ‘ನಟಿಕ್ಸಿಸ್ ಗ್ಲೋಬಲ್’ ಈ ಸಮೀಕ್ಷೆ ನಡೆಸಿದೆ. ನಿವೃತ್ತಿಯ ಬಳಿಕ ನೆಮ್ಮದಿಯ ಬದುಕು, ಉಳಿತಾಯ ವೌಲ್ಯದ ಸಂರಕ್ಷಣೆ ಮತ್ತು ಆದಾಯವನ್ನು ಗರಿಷ್ಠಗೊಳಿಸುವ ನಿಟ್ಟಿನಲ್ಲಿ ಗುಣಮಟ್ಟದ ಆರ್ಥಿಕ ಸೇವೆಯ ಲಭ್ಯತೆ, ಗುಣಮಟ್ಟದ ಆರೋಗ್ಯ ಸೇವೆಯ ಲಭ್ಯತೆ ಮತ್ತು ಶುದ್ಧ ಹಾಗೂ ಸುರಕ್ಷಿತ ಪರಿಸರ- ಈ ನಾಲ್ಕು ವಿಷಯಗಳ ಆಧಾರದಲ್ಲಿ ದೇಶಗಳಿಗೆ ಶ್ರೇಯಾಂಕ ನೀಡಲಾಗಿದೆ. ಈ ನಾಲ್ಕೂ ವಿಭಾಗಗಳಲ್ಲಿ ಭಾರತ ಕಟ್ಟಕಡೆಯ ಸ್ಥಾನ ಪಡೆದಿದೆ. ಸ್ವಿಝರ್ಲಾಂಡ್, ನಾರ್ವೆ ಮತ್ತು ಐಸ್‌ಲ್ಯಾಂಡ್ ಅಗ್ರ ಮೂರು ಸ್ಥಾನ ಗಳಿಸಿದೆ.

ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಮುಂದುವರೆದ ಅರ್ಥವ್ಯವಸ್ಥೆ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ(ಒಸಿಇಡಿ) ಸದಸ್ಯರು ಹಾಗೂ ಬ್ರಿಕ್ಸ್ ರಾಷ್ಟ್ರಗಳು (ಬ್ರೆಝಿಲ್, ರಶ್ಯ, ಭಾರತ ಮತ್ತು ಚೀನಾ) ಈ 43 ರಾಷ್ಟ್ರಗಳ ಪಟ್ಟಿಯಲ್ಲಿವೆ. ಈ ಪಟ್ಟಿಯಲ್ಲಿ ಬಹುತೇಕ ಮುಂದುವರಿದ ಅರ್ಥವ್ಯವಸ್ಥೆ ಹೊಂದಿರುವ ರಾಷ್ಟ್ರಗಳೇ ಇವೆಯಾದರೂ, ಬ್ರಿಕ್ಸ್ ರಾಷ್ಟ್ರಗಳಿಗೆ ಹೋಲಿಸಿದರೂ ಭಾರತದ ಸಾಧನೆ ಕಳಪೆಯಾಗಿರುವುದು ಗಮನಾರ್ಹವಾಗಿದೆ.

 ಲೌಕಿಕ ನೆಮ್ಮದಿ ವಿಭಾಗದಲ್ಲಿ ಭಾರತ 41ನೇ ಸ್ಥಾನ, ಆರೋಗ್ಯದ ವಿಭಾಗದಲ್ಲಿ 43ನೇ ಸ್ಥಾನ ಗಳಿಸಿದರೆ, ಆರ್ಥಿಕ ಸೇವೆಯ ಲಭ್ಯತೆ ವಿಭಾಗದಲ್ಲಿ 39ನೇ ಸ್ಥಾನ ಮತ್ತು ಜೀವನದ ಗುಣಮಟ್ಟ ವಿಭಾಗದಲ್ಲಿ 43ನೇ ಸ್ಥಾನ ಗಳಿಸಿದೆ. ಆರೋಗ್ಯ ವಿಭಾಗದಲ್ಲಿ ಸತತ ದ್ವಿತೀಯ ವರ್ಷವೂ ಭಾರತಕ್ಕೆ ಕಡೆಯ ಸ್ಥಾನ ದೊರಕಿದೆ. ಅಲ್ಲದೆ ಭಾರತದ ತಲಾ ಆದಾಯ ಅತ್ಯಂತ ಕಡಿಮೆಯಾಗಿರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News