ವೈದ್ಯಕೀಯ ಶಿಕ್ಷಣದಲ್ಲಿ ಸ್ಟಿರಿಯೊ ಸ್ಕೋಪಿಕ್ ತಂತ್ರಜ್ಞಾನದ ಬಳಕೆ: ಮಾಸ್ಟರ್ ಕಿಶನ್
ಮಂಗಳೂರು, ಆ. 9: ಕರ್ನಾಟಕದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ದೃಶ್ಯದೊಂದಿಗೆ ಕಲಿಕೆಗೆ ಅನುಕೂಲವಾಗಲು ಸ್ಟಿರಿಯೊಸ್ಕೋಪಿಕ್ 3ಡಿ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ ಎಂದು ತಂತ್ರಜ್ಞಾನದ ಪ್ರಸಾರದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಮಾಸ್ಟರ್ ಕಿಶನ್ ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲಂಡನ್ ಮೂಲದ ವಿನ್‌ಫಾಮ್ಯಾಕ್ಸ್ ಸಂಸ್ಥೆ ಈ ತಂತ್ರಜ್ಞಾನವನ್ನು ಸಿದ್ಧಪಡಿಸಿದೆ. ಈ ತಂತ್ರಜ್ಞಾನದಿಂದ ತರಗತಿಯ ಕೊನೆಯಲ್ಲಿ ಕುಳಿತಿರುವ ವಿದ್ಯಾರ್ಥಿಯೂ ಪಾಠದ ದೃಶ್ಯಗಳನ್ನು ಸ್ಪಷ್ಟವಾಗಿ ಹತ್ತಿರ ಬಂದು ಕಾಣುವಂತೆ ರೂಪಿಸಲಾಗಿದೆ.
ಈ ತಂತ್ರಜ್ಞಾನ ಈಗಾಗಲೇ ಅಮೆರಿಕಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾಗಳಲ್ಲಿ ಹಾಗೂ ಬೆಂಗಳೂರಿನ ಒಂದೆರಡು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಇವೆ ಎಂದರು. ಮಾರುಕಟ್ಟೆ ಮುಖ್ಯ ವ್ಯವಸ್ಥಾಪಕ ಸುರೇಶ್ ಕೃಷ್ಣಮೂರ್ತಿ ಮಾತನಾಡಿ, ಎಂಬಿಬಿಎಸ್, ಫಿಸಿಯೋಫೆರಪಿ, ದಂತವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ 3ಡಿ ತಂತ್ರಜ್ಞಾನದ ದೃಶ್ಯಗಳನ್ನು ಸಿದ್ಧಪಡಿಸಲಾಗಿದೆ.
ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಉಪನ್ಯಾಸಕರಿಗೂ ಉಪಯುಕ್ತವಾಗಿದೆ. ಮಾನವನ ದೇಹದ ಅವಯವಗಳು ಹಾಗೂ ಅಂಗ ರಚನಾ ಶಾಸ್ತ್ರ, ಶರೀರ ಶಾಸ್ತ್ರ ಹಾಗೂ ಜೀವರಸಾಯನ ಶಾಸ್ತ್ರದಲ್ಲಿ ದೃಶ್ಯಗಳು ಪರದೆಯಿಂದ ವಿದ್ಯಾರ್ಥಿಯ ಹತ್ತಿರಕ್ಕೆ ಬಂದು ನಿಲ್ಲುತ್ತವೆ ಎಂದರು.
ಪ್ರತಿ ವಿದ್ಯಾರ್ಥಿಗೆ ತಲಾ 10 ಸಾವಿರ ಚಂದಾ ಶುಲ್ಕವನ್ನು ವಿಧಿಸಲಾಗುತ್ತದೆ. ಥಿಯರಿ ಬೋಧನೆಯ ಬಳಿಕ ಈ 3ಡಿ ತಂತ್ರಜ್ಞಾನವನ್ನು ಬಳಸಬಹುದು ಎಂದು ಡಾ.ಚಂದ್ರಶೇಖರ್ ಹೇಳಿದರು.
ಇದೇ ಸಂದರ್ಭ ಸ್ಟಿರಿಯೊಸ್ಕೋಪಿಕ್ 3ಡಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ಡಾ.ಶಾಂತಾರಾಮ ಶೆಟ್ಟಿ, ಡಾ.ವಿಜಯ ಕುಮಾರ್, ಡಾ.ಶಿವಶರಣ ಶೆಟ್ಟಿ ಮಾತನಾಡಿದರು.