ಪಕ್ಷ ಅವಕಾಶ ನೀಡಿದಲ್ಲಿ ಮುಂದಿನ ಬಾರಿ ಕೊನೆಯ ಸ್ಪರ್ಧೆ- ಶಕುಂತಳಾ ಶೆಟ್ಟಿ

Update: 2017-08-09 17:30 GMT

ಪುತ್ತೂರು, ಆ. 9; ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿನ ಹಾಲಿ ಶಾಸಕರಿಗೆ ಸ್ಪರ್ಧೆಗೆ ಅವಕಾಶ ಕೊಟ್ಟರೆ ನನಗೂ ಪುತ್ತೂರು ಕ್ಷೇತ್ರದಲ್ಲಿ ಸ್ಪರ್ದಿಸಲು ಅವಕಾಶ ಸಿಗಬಹುದು. ಹಾಗೆಂದು ತಾನು ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ವೇಳೆಯೂ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬೇಕೆಂದು ಕೇಳಿರಲಿಲ್ಲ. ಯಾವುದೇ ಬೇಡಿಕೆ ಇಡದೆ ಹೋದವಳು ತಾನು. ಆದರೆ ಅವರಾಗಿಯೇ ಪುತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಶಾಸಕಿಯಾಗಿ ತನನಿಂದ ಸಾಧ್ಯವಾದಷ್ಟು ಕೆಲಸ ಮಾಡಿದ್ದೇನೆ. ಈ ಸಲವೂ ನಾನು ಅವಕಾಶ ಕೊಡಿ ಎಂದು ಕೇಳುವುದಿಲ್ಲ. ಪಕ್ಷ ಅವಕಾಶ ಮಾಡಿಕೊಟ್ಟಲ್ಲಿ ಖಂಡಿತಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಆದರೆ ಈ ಬಾರಿ ನನ್ನ ಕೊನೆಯ ಸ್ಪರ್ಧೆಯಾಗಿರುತ್ತದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಅವರು ಹೇಳಿದರು.

ಪುತ್ತೂರಿನಲ್ಲಿ ಬುಧವಾರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಚುನಾವಣೆಯಲ್ಲಿ ಭಾಗವಹಿಸಲು ಟಿಕೇಟ್ ಸಿಗಬೇಕು. ಕಳೆದ 4 ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಿದ್ದೇನೆ. ನನ್ನ ಕೆಲಸದಲ್ಲಿ ನನಗೆ ಖಂಡಿತಾ ತೃಪ್ತಿ ಇದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟಿದ್ದೇನೆ. ಹಾಲಿ ಶಾಸಕಿ ಎನ್ನುವ ನೆಲೆಯಲ್ಲಿ ಪಕ್ಷ ಅವಕಾಶ ನೀಡಿದರೆ ಒಂದು ಬಾರಿ ಸ್ಪರ್ಧಿಸುತ್ತೇನೆ .ಆದರೆ ಇದು ತನ್ನ ಕೊನೆಯ ಸ್ಪರ್ಧೆ ಆಗಿರುತ್ತದೆ . ಮತ್ತೆ ಸ್ಪಧಿರ್ಸುವುದಿಲ್ಲ ಎಂದವರು ತಿಳಿಸಿದರು.

ಪುತ್ತೂರು ಕಾಂಗ್ರೆಸ್ ಪಕ್ಷದಲ್ಲಿರುವ ಆಂತರಿಕ ಒಡಕು ಸರಿಪಡಿಸಲು ಅಸಾಧ್ಯ. ಹಾಗಂತ ನನಗೆ ಯಾರ ಮೇಲೂ ದ್ವೇಷವಿಲ್ಲ. ನಾನು ಎಲ್ಲರೊಂದಿಗೂ ಸ್ನೇಹಾಚಾರದೊಂದಿಗೆ ನಡೆದುಕೊಂಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದ ಕಾರಣ ಇಲ್ಲಿ ಕೆಲಸ ಮಾಡಿದ ಪಕ್ಷದ ಕೆಲವರಿಗೆ ಟಿಕೇಟ್ ಸಿಗಲಿಲ್ಲ ಎಂಬ ನೋವು ಇರುವುದು ಸಹಜ. ಆದರೆ ವೈಯುಕ್ತಿಕ ನೆಲೆಯಲ್ಲಿ ನನಗೆ ಯಾರ ಮೇಲೂ ಬೇಸರವಿಲ್ಲ. ನನ್ನ ಮೇಲೆಯೂ ಯಾರಿಗೂ ಬೇಸರ ಇಲ್ಲ ಎಂದು ಅಂದುಕೊಂಡಿದ್ದೇನೆ ಎಂದ ಅವರು ಯಾವುದೇ ಪಕ್ಷದಲ್ಲೂ ಒಡಕುಗಳಿರುವುದು ಸಾಮಾನ್ಯ ವಿಚಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ,ಉಲ್ಲಾಸ್ ಕೋಟ್ಯಾನ್ ಹಾಗೂ ಅಬೂಬಕ್ಕರ್ ಆರ್ಲಪದವು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News