ಆ 19ರಂದು ಪುತ್ತೂರಿನಲ್ಲಿ ’ಬೃಹತ್ ಉದ್ಯೋಗ ಮೇಳ’

Update: 2017-08-09 17:42 GMT

ಪುತ್ತೂರು, ಆ. 9 ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಸಾರಥ್ಯದಲ್ಲಿ ಮತ್ತು ವಿದ್ಯಾಮಾತಾ ಪೌಂಡೇಶನ್, ಜಯ ಕರ್ನಾಟಕ ಸಂಘಟನೆಗಳ ಆಶ್ರಯದಲ್ಲಿ ಆಗಸ್ಟ್ 19ರಂದು ಪುತ್ತೂರಿನ ನೆಹರುನಗರದ ಸುದಾನ ವಸತಿ ಶಾಲೆಯಲ್ಲಿ ’ಬೃಹತ್ ಉದ್ಯೋಗ ಮೇಳ-2017’ ನಡೆಯಲಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು.

ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ.19 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ ನಡೆಯುವ ಈ ಉದ್ಯೋಗ ಮೇಳದ ಮುಖಾಂತರ ಪುತ್ತೂರಿನ ಯುವಕ ಯುವತಿಯರಿಗೆ ಉದ್ಯೋಗ ದೊರೆತರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಸುಮಾರು 150 ಕಂಪೆನಿಗಳು ಇಲ್ಲಿ ಬಂದು ತಮಗೆ ಬೇಕಾದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ನೇರ ನೇಮಕಾತಿ ಮಾಡಿಕೊಳ್ಳಲಿವೆ. ಸುಮಾರು 4000 ಸಾವಿರಕ್ಕೂ ಹೆಚ್ಚು ಉದ್ಯೋಗದ ಅವಕಾಶಗಳಿವೆ. ಈಗಾಗಲೇ 1700 ಮಂದಿ ಉದ್ಯೋಗಾಂಕ್ಷಿಗಳು ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ. ಸುಮಾರು 3000 ಸಾವಿರ ಮಂದಿ ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದವರು ತಿಳಿಸಿದರು.

ಪುತ್ತೂರಿನಲ್ಲಿ ಮೊತ್ತ ಮೊದಲ ಬಾರಿಗೆ ಈ ನೇರ ನೇಮಕಾತಿ ಮತ್ತು ಸಂದರ್ಶನ ಎದುರಿಸುವ ಮಾಹಿತಿ ಕಾರ್ಯಾಗಾರ ನಡೆಸಲಾಗುತ್ತಿದ್ದು, ಈ ಮೇಳದಲ್ಲಿ 7ನೇ ತರಗತಿ, 10 ನೇ ತರಗತಿ, ಪಿಯುಸಿ, ಡಿಪ್ಲಮೋ, ಐಟಿಐ, ಬಿ.ಎ, ಬಿಎಸ್‌ಸಿ, ಬಿಇ, ಬಿ.ಟೆಕ್, ಉನ್ನತ ವ್ಯಾಸಾಂಗ ಸೇರಿದಂತೆ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಭಾಗವಹಿಸಬಹುದು.

ಭಾಗವಹಿಸುವ ಅಭ್ಯರ್ಥಿಗಳು 10 ರೆಶ್ಯೂಮ್ ಹಾಗೂ 5 ಭಾವಚಿತ್ರಗಳನ್ನು ತರಬೇಕು. ಪ್ರತಿ ಅಭ್ಯರ್ಥಿಗೆ ಕನಿಷ್ಟ 5 ಆಯ್ಕೆಯ ಅವಕಾಶ ಕಲ್ಪಿಸಲಾಗಿದೆ ಎಂದವರು ಮಾಹಿತಿ ನೀಡಿದರು.

ಪ್ರತಿ ಮನೆಗೂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದಿಂದ ಪುತ್ತೂರಿನ ಸ್ವಲ್ಪ ಮಟ್ಟಿಗಾದರೂ ಪ್ರಯೋಜನವಾಗಲಿ ಎಂಬುವುದೇ ಉದ್ದೇಶವಾಗಿದೆ. ಈ ಮೇಳದಲ್ಲಿ ಅಭ್ಯರ್ಥಿಗಳಿಂದ ಯಾವುದೇ ಪ್ರವೇಶಧನ ಪಡೆಯಲಾಗುವುದಿಲ್ಲ. ಇಲ್ಲಿ ಬಂದ ಅಭ್ಯರ್ಥಿಗಳಿಗೆ ಊಟ ಉಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದವರು ತಿಳಿಸಿದರು.

 ವಿದ್ಯಾಮಾತಾ ಪೌಂಡೇಶನ್ ಅಧ್ಯಕ್ಷ ಮಾತನಾಡಿ, ಈ ಮೇಳದಲ್ಲಿ ನೇರನೇಮಕಾತಿ ನಡೆಸುವ ಮೂಲಕ ಉದ್ಯೋಗ ದೊರಕಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಈಗಾಗಲೇ ವಿದ್ಯಾಮಾತಾ ಪೌಂಡೇಶನ್ ವತಿಯಿಂದ 450 ಮಂದಿಗೆ ಉದ್ಯೋಗ ಕೊಡಿಸಲಾಗಿದೆ. ಅಭ್ಯರ್ಥಿಗಳು ನೋಂದಣಿಗಾಗಿ ಮೊ. 7676699000 ಇದಕ್ಕೆ ಕರೆ ಮಾಡಬಹುದು ಎಂದವರು ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಪುತ್ತೂರು ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ , ಜಯಕರ್ನಾಟಕ ಸಂಘಟನೆ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯೋಗ ಮೇಳ ಸಮಿತಿಯ ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್‌ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News