ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಕೊಯ್ಯೂರು ಪಂಚಾಯತ್ ಎದುರು ರೈತರ ಹೋರಾಟ
ಬೆಳ್ತಂಗಡಿ, ಆ. 9: ಮೂಲಭೂತ ಸೌಕರ್ಯಒದಗಿಸಲಾಗದ ಗ್ರಾಮ ಪಂಚಾಯತು ಇದ್ದರೂ ಸತ್ತಂತೆಯೇ ಎಂದು ಕರ್ನಾಟಕ ಪ್ರಾಂತರೈತ ಸಂಘ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಬಟ್ ಹೇಳಿದರು.
ಅವರು ಬುಧವಾರ ಕರ್ನಾಟಕ ಪ್ರಾಂತರೈತ ಸಂಘ ಕೊಯ್ಯೂರು ಘಟಕ, ಡಿ.ವೈ.ಎಫ್.ಐ. ಕೊಯ್ಯೂರು ಘಟಕ, ಹಾಗೂ ಸಮುದಾಯ ಸಮಿತಿ ಎರುಕಡಪ್ಪು ಜಂಟಿಯಾಗಿ ಆದೂರುಪೆರಾಲು-ಎರುಕಡಪ್ಪು-ಗೇರುಕಟ್ಟೆ ರಸ್ತೆ ಮರು ಡಾಮರೀಕರಣಮಾಡಬೇಕು, ಉಣ್ಣಾಲುನಿಂದ- ಬರಾಯದಡ್ಡರಸ್ತೆ ದುರಸ್ತಿ ಮಾಡಬೇಕು., ಈ ರಸ್ತೆಗಳ ಬದಿಯ ಚರಂಡಿಗಳನ್ನು ದುರಸ್ಥಿಗೊಳಿಸಬೇಕು, ಕೊಯ್ಯೂರುಗ್ರಾಮದ 3 ನೇ ವಾರ್ಡಿನಲ್ಲಿ ನೀರಿನ ವ್ಯವಸ್ಥೆಗಾಗಿ, ಡೋರ್ ನಂಬ್ರದ ಹೆಸರಲ್ಲಿ ಪ್ರತಿ ಮನೆಯಿಂದ ಮನೆತೆರಿಗೆ 80 ರೂ. ಹೆಚ್ಚುವರಿ ವಸೂಲಿಯ ವಿರುದ್ದ, 3 ನೇ ವಾರ್ಡಿನಲ್ಲಿ ಮತ್ತು ಉಣ್ಣಲು ಎಂಬಲ್ಲಿ ದಾರಿದೀಪ ಸರಿಪಡಿಸಲು ಆಗ್ರಹಿಸಿ, ಎಲ್ಲಾ ಬಡವರಿಗೆ ಆಶ್ರಯ ಮನೆಗಳನ್ನು ಒಗಿಸಬೇಕು, 94 ಸಿ ಅರ್ಜಿಗಳನ್ನು ತ್ವರಿತ ವಿಲೆವಾರಿ ಮಾಡಿ, ಬಡವರಿಗೆ ಉಚಿತ ಹಕ್ಕುಪತ್ರ ಒದಗಿಸಲು ಕ್ರಮಕೈಗೊಳ್ಳಬೇಕು. ಮುಂತಾದ ಬೇಡಿಕೆಗಳ ಈಡೇರಿಕಗಳಿಗೆ ಆಗ್ರಹಿಸಿ ಕೊಯ್ಯೂರು ಗ್ರಾಮ ಪಂಚಾಯತ್ ಎದುರು ನಡೆದ ಧರಣಿ ಹೋರಾಟವನ್ನುದ್ದೇಶಿಸಿ ಮಾತಾಡುತ್ತಿದ್ದರು.
ಉಣ್ಣಾಲು ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ಮಾಡಲು, ದಾರಿದೀಪದ ಸಂಪರ್ಕವೇ ಇಲ್ಲದೆ ಸಂಪರ್ಕ ಒದಗಿಸಿದೆ ಎಂದು ನಾಮಪಲಕ ಹಾಕಿ ಪ್ರಚಾರಗಿಟ್ಟಿಸುವ ಹಾಗೂ ಮರಳು ಸಾಗಾಟ ಮಾಡಲು ಬಹಿರಂಗ ಬೆಂಬಲ ನೀಡುವ ಪಂಚಾಯತು ಇದಾಗಿದ್ದು ಕೂಡಲೇ ಈ ಪಂಚಾಯತನ್ನು ಬರಕಾಸ್ತು ಮಾಡಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶ, ಸವಲತ್ತುಗಳನ್ನು ಒದಗಿಸಲು ಪ್ರಮಾಣಿಕ ಪ್ರಯತ್ನವನ್ನೂ ಕೂಡಾ ಮಾಡದ ಕೊಯ್ಯೂರು ಪಂಚಾಯತನ್ನು ಅವರು ತರಾಟೆಗೆತೆಗೊಂಡರು. ಗ್ರಾಮ ಸಭೆಯಲ್ಲಿ ನಿರ್ಣಯ, ಕ್ರಿಯಾಯೋಜನೆ, ಫಲಾನುಭಿಗಳ ಆಯ್ಕೆ ಮಾಡುವ ಬದಲು ಮನ ಬಂದಂತೆ ಕೆಲಸಗಳಾಗುತ್ತಿವೆ ಎಂದರೆ ಇದೇನು ಭಾರತ ದೇಶದೊಳಗಿನ ಪಂಚಾಯತು ಅಲ್ಲವೇ ಎಂದವರು ಪ್ರಶ್ನಿಸಿದರು.
ಇನ್ನು 15 ದಿವಸಗಳಲ್ಲಿ ಜನರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ರೈತ ಸಂಘ, ಸಮುದಾಯ ಸಮಿತಿ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳನ್ನು ಜೊತೆಗೂಡಿಸಿ ಬೆಳ್ತಂಗಡಿ ಇಂಜಿನಿಯರಿಂಗ್ ಉಪವಿಭಾಗಕಚೇರಿಯಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದವರು ಎಚ್ಚರಿಕೆ ನೀಡಿದರು.
ಕಾರ್ಮಿಕ ಮುಖಂಡರಾದ ಹೈದರಾಲಿ ಹಳ್ಳಿ ಮನೆ ಹೋರಾಟದ ಅನಿವಾರ್ಯತೆಯನ್ನು ವಿವರಿಸಿದರು. ಬಾಬು ಹೇಮಲ್ಕೆ ಅವರು ಸ್ವಾಗತಿಸಿ, ವಂದಿಸಿದರು. ಹೋರಾಟದಲ್ಲಿ ಡಿ.ವೈಎಫ್.ಐ. ಬೆಳ್ತಂಗಡಿ ತಾಲೂಕು ಅದ್ಯಕ್ಷರಾದ ಧನಂಜಯಗೌಡ, ಸಿಪಿಐ(ಎಂ) ಮುಖಂಡರಾದ ಜಯರಾಮ ಮಯ್ಯ, ರೈತ ಮುಖಂಡರಾದ ಸಂಜೀವ ನಾಯ್ಕ, ಜಾರಪ್ಪ ಕೊಯ್ಯೂರು, ಹಕೀಂ ಮೊದಲಾದವರು ಹೋರಾಟದ ನೇತೃತ್ವ ವಹಿಸಿದ್ದರು.