ಬೋಳಿಯಾರ್: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಮುಸ್ಲಿಂ ಧಾರ್ಮಿಕ ಗುರುಗಳ ಸಭೆ
ಉಳ್ಳಾಲ, ಆ. 10: ಭಾರತೀಯ ಜನತಾ ಪಕ್ಷದ ಮಂಗಳೂರು ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಮುಸ್ಲಿಂ ಧಾರ್ಮಿಕ ಗುರುಗಳ ಸಭೆಯು ಬೋಳಿಯಾರ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಧಾರ್ಮಿಕ ಗುರು ಹನೀಫ್ ನಿಝಾಮಿ ಮುಸ್ಲಿಂ ಧರ್ಮಗುರುಗಳಿಗೆ ಯಾವುದೇ ರಾಜಕೀಯ ಪಕ್ಷ ಇಲ್ಲ. ಆದರೆ ನಮ್ಮ ಊರಿಗೆ, ನಮ್ಮ ಜಮಾಅತ್‌ಗೆ, ಎಲ್ಲಾ ಧರ್ಮದ ಜನರಿಗೆ ಉಪಕಾರ ಮಾಡುವ ಪಕ್ಷಗಳಿಗೆ ನಾವು ಕೃತಜ್ಞರಾಗಬೇಕಿದೆ. ಎಲ್ಲದರಲ್ಲೂ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್, ಅಲ್ಪಸಂಖ್ಯಾತರಿಗೆ ಏನು ಮಾಡಿದ್ದಾರೆ? ಕೇವಲ ಓಟು ಬ್ಯಾಂಕ್ ಮಾಡ್ತಾ ಇದ್ದಾರೆ. ಪ್ರಥಮ ಬಾರಿಗೆ ಇಂತಹ ಧಾರ್ಮಿಕ ಗುರುಗಳ ಸಮಾವೇಶ ನಡೆಯುತ್ತಿದ್ದು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಲ್ಲುವುದಕ್ಕೆ ಹಿಂಜರಿಯಬಾರದು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ಕಾಂಗ್ರೆಸ್ ಸರಕಾರವು ಅಲ್ಪಸಂಖ್ಯಾತರಿಗೆ ಅಂಗೈಗೆ ಬೆಲ್ಲ ಮುಟ್ಟಿಸುವ ಕೆಲಸ ಮಾತ್ರ ಮಾಡುತ್ತಿದೆ. ಆದರೆ ಬಿಜೆಪಿ ಸರಕಾರವಿದ್ದಾಗ ಯಡಿಯೂರಪ್ಪ ಅವರು ರಾಜ್ಯ ಅಲ್ಪಸಂಖ್ಯಾತರಿಗೆ ನೂರಾರು ಸೌಲಭ್ಯಗಳನ್ನು ಒದಗಿಸಿದ್ದರು. ಒಟ್ಟಿನಲ್ಲಿ ನಾವು ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೆ ಸಮಾಜದಲ್ಲಿ ಶಾಂತಿ ನೆಮ್ಮದಿಯ ವೇದಿಕೆಯನ್ನು ಕಟ್ಟುವ ಕೆಲಸ ಅಗತ್ಯವಾಗಿ ಮಾಡಬೇಕಾಗಿದೆ ಎಂದು ಹೇಳಿದರು.
ಬಂಟ್ವಾಳ ಕ್ಷೇತ್ರದ ಬಿಜೆಪಿ ಮುಖಂಡ ರಾಜೇಶ್ ಶೆಟ್ಟಿ ಉಳಿಪಾಡಿ ಗುತ್ತು ಮಾತನಾಡಿ, ದೇಶವನ್ನು ಕಟ್ಟುವ ಕೆಲಸದಲ್ಲಿ ಧಾರ್ಮಿಕ ಗುರುಗಳ ಪಾತ್ರ ಬಹಳ ಮಹತ್ವವಾದದ್ದು. ಭಾರತ ದೇಶವು ಇಡೀ ವಿಶ್ವದ ಗಮನ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಜಗದ್ಗುರುವಾಗಿ ಬಿಂಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ರಾಮದಾಸ್, ಡಾ.ಮುನೀರ್ ಬಾವ ಹಾಜಿ, ಅಲ್ಪಸಂಖ್ಯಾತ ಮೋರ್ಚಾದ ಅಶ್ರಫ್ ಹರೇಕಳ, ಸಿದ್ದೀಕ್ ನಿಝಾಮಿ, ಬಂಟ್ವಾಳ ಅಲ್ಪಸಂಖ್ಯಾತ ಮೋರ್ಚಾದ ಮುಸ್ತಫಾ ಮೊದಲಾದವರು ಉಪಸ್ಥಿತರಿದ್ದರು.
ಅಲ್ಪಸಂಖ್ಯಾತ ಮೋರ್ಚಾದ ಮುಹಮ್ಮದ್ ಅಸ್ಗರ್ ಸ್ವಾಗತಿಸಿದರು. ಮುನೀರ್ ಮಾಸ್ಟರ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಧಾರ್ಮಿಕ ಗುರುಗಳು ಭಾಗವಹಿಸಿದ್ದರು.