‘ನರ್ಮದಾ ಬಚಾವೋ’ ಆಂದೋಲನ ಹತ್ತಿಕ್ಕಲು ಮುಂದಾದ ನಕಲಿಗಳ ಬಣ್ಣ ಬಯಲು

Update: 2017-08-10 14:52 GMT

ಹೊಸದಿಲ್ಲಿ, ಆ.10: “ನಾನು ನನ್ನ ಮನೆಯನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಬೆಳೆದಂತಹ ಪ್ರದೇಶವದು. ಆದರೆ 3 ರಾಜ್ಯಗಳ ಅಭಿವೃದ್ಧಿಯ ದೃಷ್ಟಿಯಿಂದ ಸರ್ದಾರ್ ಸರೋವರ್ ಡ್ಯಾಮ್ ಎಷ್ಟೊಂದು ಪ್ರಮುಖವಾದುದು ಎಂದು ನಾನು ಅರ್ಥ ಮಾಡಿಕೊಳ್ಳಬಲ್ಲೆ” ಈ ಮೇಲಿನ ಟ್ವೀಟನ್ನು ಓದಿದ ತಕ್ಷಣ ನರ್ಮದಾ ಅಣೆಕಟ್ಟು ಯೋಜನೆಯಿಂದ ಮನೆ ಕಳೆದುಕೊಂಡ ವ್ಯಕ್ತಿಯ ಬೇಸರ ಹಾಗೂ ಮನೆ ಕಳೆದುಕೊಂಡರೂ ಅಭಿವೃದ್ಧಿಯ ದೃಷ್ಟಿಯಿಂದ ಯೋಜನೆಗೆ ಬೆಂಬಲ ಸೂಚಿಸುತ್ತಿರುವುದು ತಿಳಿದುಬರುತ್ತದೆ.

“ಸರ್ದಾರ್ ಸರೋವರ್ ಅಣೆಕಟ್ಟಿನಿಂದ ನಾವು ನಮ್ಮ ಮನೆಗಳನ್ನು ಕಳೆದುಕೊಂಡರೂ, ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಉತ್ತಮ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ” ಎನ್ನುವ ಟ್ವೀಟೊಂದಿದೆ. ಈ ಟ್ವೀಟನ್ನು ಓದುವಾಗ ಇದು ಸಂತ್ರಸ್ತನೋರ್ವ ಹೇಳುವ ಮಾತುಗಳಲ್ಲ ಎನ್ನುವುದೂ ದೃಢವಾಗುತ್ತದೆ.

ಮುಂದುವರಿದು ಮತ್ತೊಂದು ಟ್ವೀಟ್, “ಎಲ್ಲವನ್ನೂ ಬಿಟ್ಟು ಸಾಗುವುದು ಸುಲಭವಲ್ಲ. ಆದರೆ ಶಿವರಾಜ್ ಚೌಹಾಣ್ ರಂತಹ ಮುಖ್ಯಮಂತ್ರಿಯಿರುವಾಗ ನಮ್ಮ ಆತಂಕಗಳನ್ನು ಮರೆಯಬೇಕಾಗುತ್ತದೆ” ಎಂದು ಮತ್ತೊಂದು ಟ್ವೀಟ್ ಹೇಳುತ್ತದೆ.

ಆದರೆ ಈ ಎಲ್ಲಾ ಟ್ವೀಟ್ ಗಳನ್ನು ಸಂತ್ರಸ್ತರೇ ಮಾಡಿದ್ದಾರೋ ಎನ್ನುವ ಅನುಮಾನ ನಮ್ಮಲ್ಲಿ ಮೂಡದೇ ಇರದು. ನಕಲಿ ಖಾತೆಗಳನ್ನು ಸೃಷ್ಟಿಸಿ ರಾಜಕೀಯವಾಗಿ ಪ್ರತಿಸ್ಪರ್ಧಿಗಳನ್ನು ಹಣಿಯಲು ಹಾಗೂ ತನ್ನ ಕೆಲಸ ಕಾರ್ಯಗಳನ್ನು ಯಾವುದೇ ಕಪ್ಪು ಚುಕ್ಕೆಯಿಲ್ಲದಂತೆ ಸುಲಭವಾಗಿಸಲು ಬಿಜೆಪಿಯ ಐಟಿ ಸೆಲ್ ಹೇಗೆಲ್ಲಾ ಕಸರತ್ತುಗಳನ್ನು ನಡೆಸುತ್ತದೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ. ಈ ಬಾರಿ ನರ್ಮದಾ ಬಚಾವೋ ಆಂದೋಲನ ಹಾಗೂ ಮೇಧಾ ಪಾಟ್ಕರ್ ವಿರುದ್ಧವೂ ಈ ಐಟಿ ವಿಭಾಗ ಕಾರ್ಯತಂತ್ರಗಳನ್ನು ಹೆಣೆದಿದ್ದು, ಈ ಕಾರ್ಯತಂತ್ರಗಳನ್ನು ಆಲ್ಟ್ ನ್ಯೂಸ್ ಡಾಟ್ ಇನ್ (altnews.in) ಬಯಲಿಗೆಳೆದಿದೆ.

ಈ ಮೇಲಿನ ಟ್ವೀಟ್ ಗಳನ್ನು ಗಮನಿಸುವುದಾದರೆ ಇದು ಕೇವಲ ಮೂವರು ಮಾಡಿರುವ ಟ್ವೀಟ್ ಗಳಲ್ಲ. ಬದಲಾಗಿ, ಬೇರೆ ಬೇರೆ ಖಾತೆಗಳಿಂದ ಸುಮಾರು 300 ಬಾರಿ ಒಂದೇ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ. ಒಂದರಕ್ಷವೂ ಬದಲಾವಣೆಯಾಗದಂತೆ ಟ್ವೀಟ್ ಮಾಡಲಾಗಿದೆ. ಟ್ವೀಟ್ ಗಳಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನು ಹೊಗಳಿ ಅಟ್ಟಕ್ಕೇರಿಸುವ ಜೊತೆಗೆ ಅವರಿಗೆ ಕೃತಜ್ಞತೆಯನ್ನೂ ಸಲ್ಲಿಸಲಾಗಿದೆ..!.

ತಮ್ಮದೆಲ್ಲವನ್ನೂ ಕಳೆದುಕೊಂಡರೂ ಈ ಟ್ವಿಟ್ಟರ್ ಅಕೌಂಟ್ ನಷ್ಟದ ಹೊರತಾಗಿಯೂ ಮುಖ್ಯಮಂತ್ರಿಯನ್ನು ಹೊಗಳುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಿರ್ಧರಿಸುವಲ್ಲಿಯೂ ಅವರು ಸಂತೋಷಗೊಂಡಿದ್ದಾರೆ ಹಾಗೂ ಎಲ್ಲರಿಗೂ ಒಂದೇ ಟ್ವೀಟನ್ನು ನೀಡಲಾಗಿದೆ.

ಡೇನಿಯಲ್ ಭಾರದ್ವಾಜ್, ಅರ್ಜಿತ್ ಫೆರ್ನಾಂಡಿಸ್, ಅರಿಂದಂ ಸೇನ್ ಗುಪ್ತಾ, ಇಶಿತಾ, ಜಾಸ್ಮಿನ್, ಪರ್ವೀನ್ ಖಾನ್ ಹಾಗೂ ನೂರಾರು ವಿವಿಧ ಹೆಸರುಗಳ ಖಾತೆಗಳು ಅಣೆಕಟ್ಟು ಯೋಜನೆಯಿಂದ ಮನೆ ಕಳೆದುಕೊಳ್ಳುವವರು ಹಾಗೂ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸುವವರು. ಇದೇ ಸಂದರ್ಭದಲ್ಲಿ ಕಾಂಗ್ರೆಸನ್ನೂ ಮೇಧಾ ಪಾಟ್ಕರ್  ಅವರು ಟೀಕಿಸುತ್ತಾರೆ.

ಆದರೆ ಈ ಎಲ್ಲಾ ಟ್ವೀಟ್ ಗಳನ್ನೂ ಒಂದೇ ರೀತಿಯಲ್ಲಿ ಸ್ವಲ್ಪವೂ ಪದ, ವಾಕ್ಯ ಬದಲಾವಣೆ ಇಲ್ಲದಂತೆ ಟ್ವೀಟ್ ಮಾಡಲಾಗಿದೆ. ಅದೂ ಹಲವಾರು ಬಾರಿ. ಈ ಖಾತೆಗಳ ಹಿಂದೆ ಐಟಿ ವಿಭಾಗವೊಂದು ಕಾರ್ಯ ನಿರ್ವಹಿಸುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ. ಆದರೆ ಇದು ಮಧ್ಯಪ್ರದೇಶದ ಐಟಿ ವಿಭಾಗವೋ ಅಥವಾ ಅವರಿಂದ ಕಾಂಟ್ರಾಕ್ಟ್ ಪಡೆದ ಹೊರಗಿನವರೋ ತಿಳಿದಿಲ್ಲ.

ಒಂದು ಸಾಮಾಜಿಕ ಹೋರಾಟವನ್ನು ಹತ್ತಿಕ್ಕಲು ಈ ರೀತಿಯಲ್ಲೂ ಪಿತೂರಿ ನಡೆಸಲಾಗುತ್ತಿದೆ ಹಾಗೂ ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ದುರ್ಬಳಕೆ ಮಾಡಲಾಗುತ್ತಿದೆ. ಈ ಹಿಂದೆಯೋ ಇಂತಹ ವ್ಯವಸ್ಥಿತ ಕುತಂತ್ರಗಳು ಬಹಿರಂಗಗೊಂಡಿತ್ತು. ಆದರೂ ರಾಜಕೀಯ ಉದ್ದೇಶಗಳಿಗಾಗಿ ತಂತ್ರಜ್ಞಾನವನ್ನು ದುರುಪಯೋಗಪಡಿಸಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರಿಗೆ ಮೋಸ ಮಾಡುತ್ತಿರುವುದು ಅಪಾಯಕಾರಿಯೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News