ಅಮೆರಿಕದ ವಿದೇಶ ನೀತಿಯಲ್ಲಿ ಭಾರತಕ್ಕೆ ಆದ್ಯತೆ

Update: 2017-08-10 14:57 GMT

ವಾಶಿಂಗ್ಟನ್, ಆ. 10: ಅಮೆರಿಕದ ಟ್ರಂಪ್ ಆಡಳಿತವು ಭಾರತವನ್ನು ಮಹತ್ವದ ವಿದೇಶ ನೀತಿ ಆದ್ಯತೆಯಾಗಿ ಗುರುತಿಸಿದೆ ಎಂದು ಭಾರತಕ್ಕೆ ಅಮೆರಿಕದ ಮಾಜಿ ರಾಯಭಾರಿ ರಿಚರ್ಡ್ ರಾಹುಲ್ ವರ್ಮ ಹೇಳಿದ್ದಾರೆ.

ಉಭಯ ದೇಶಗಳ ನಡುವಿನ ಈ ಗಾಢ ಸಂಬಂಧದ ಯಶಸ್ಸು ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಅಧ್ಯಕ್ಷ ಬರಾಕ್ ಒಬಾಮರಿಗೆ ಸಲ್ಲುತ್ತದೆ ಎಂದು ಪಿಟಿಐ ಜೊತೆ ಮಾತನಾಡಿದ ವರ್ಮ ಅಭಿಪ್ರಾಯಪಟ್ಟರು.

‘‘ಟ್ರಂಪ್ ಆಡಳಿತದಲ್ಲಿ ಭಾರತವನ್ನು ಮಹತ್ವದ ವಿದೇಶ ನೀತಿ ಆದ್ಯತೆಯಾಗಿ ಮಾನ್ಯತೆ ಮಾಡಲಾಗಿದೆ ಎಂದು ನಾನು ಭಾವಿಸಿದ್ದೇನೆ. ಅಧ್ಯಕ್ಷರಿಂದ ಹಿಡಿದು ಎಲ್ಲರೂ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಅದು ತುಂಬಾ ಪ್ರೋತ್ಸಾಹದಾಯಕವಾಗಿದೆ’’ ಎಂದು ಅವರು ನುಡಿದರು.

48 ವರ್ಷದ ವರ್ಮ ಈಗ, ವಾಶಿಂಗ್ಟನ್ ಡಿಸಿಯಲ್ಲಿರುವ ತಂತ್ರಗಾರಿಕೆ ಮತ್ತು ಬಂಡವಾಳ ಸಲಹಾ ಗುಂಪು ‘ಏಶ್ಯ ಗ್ರೂಪ್’ನ ಉಪಾಧ್ಯಕ್ಷರಾಗಿದ್ದಾರೆ.

‘‘ನಿಮಗೆ ಗೊತ್ತಿರುವಂತೆ, ಒಬಾಮ ಆಡಳಿತದ ಕೊನೆಯ ಎರಡು ಅಥವಾ ಮೂರು ವರ್ಷಗಳಲ್ಲಿ ನಾವು ತುಂಬಾ ಪ್ರಗತಿಯನ್ನು ಸಾಧಿಸಿದ್ದೇವೆ ಹಾಗೂ ಅದರ ಯಶಸ್ಸು ಪ್ರಧಾನಿ ಮೋದಿ ಮತ್ತು ಮಾಜಿ ಅಧ್ಯಕ್ಷ ಒಬಾಮರಿಗೆ ಹೋಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಮತ್ತು ವಿವಿಧ ಮಾತುಕತೆಗಳ ಮೂಲಕ ನಾವು ನಮ್ಮ ಗುರಿಯನ್ನು ಸಾಧಿಸುತ್ತಿದ್ದೆವು. ಅದರ ಫಲಿತಾಂಶಗಳು ಈಗ ನಿಚ್ಚಳವಾಗಿದೆ. ಅಭಿವೃದ್ಧಿ ಇನ್ನೂ ಮುಂದುವರಿಯುತ್ತದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News