ನಾವುಂದ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
ಕುಂದಾಪುರ, ಆ.10: ಒಂದು ವರ್ಷದ ಹಿಂದೆ ನಡೆದ ನಾವುಂದ ಪಡುವಾಯಿ ಮನೆಯ ಮಾಧವ ಯಾನೆ ಮಾಸ್ತಿ ಪೂಜಾರಿ (62) ಎಂಬವರ ಕೊಲೆ ಪ್ರಕರಣದ ಅಪರಾಧಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿರಸಿ ಮೂಲದ ನಾವುಂದ ನಿವಾಸಿ ನರಸಿಂಹ ನಾಯ್ಕ(46) ಶಿಕ್ಷೆಗೆ ಗುರಿ ಯಾದ ಅಪರಾಧಿ. ಬಿಜೂರು ಹೊಸ್ಕೋಟೆ ಮೂಲದ ಮಾಧವ ಪೂಜಾರಿ ಮುಂಬೈಯಲ್ಲಿ ಕಂಪೆನಿಯೊಂದರಿಂದ ನಿವೃತ್ತರಾದ ಬಳಿಕ ನಾವುಂದ ದಲ್ಲಿರುವ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರು. ಇವರ ಪತ್ನಿ ಹಾಗೂ ಪುತ್ರ ಮುಂಬೈಯಲ್ಲಿ ಮತ್ತು ಇಬ್ಬರು ಪುತ್ರಿಯರು ಮದುವೆಯಾಗಿ ಗಂಡನ ಮನೆಯಲ್ಲಿದ್ದರು.
ನರಸಿಂಹ ನಾಯ್ಕ ನಾವುಂದದ ರೇವತಿ ಎಂಬವರನ್ನು ಮದುವೆಯಾಗಿ ಪತ್ನಿ ಮನೆಯಲ್ಲೇ ವಾಸವಾಗಿದ್ದನು. ಈತನಿಗೆ ನಾಲ್ಕು ವರ್ಷ ಪ್ರಾಯದ ಮಗು ಕೂಡ ಇದೆ. ಎರಡು ವರ್ಷಗಳಿಂದ ಕೆಲಸ ಇಲ್ಲದೆ ಮನೆಯಲ್ಲೇ ಇದ್ದ ನರಸಿಂಹ ನಾಯ್ಕಾ ಹಣಕ್ಕಾಗಿ ಮಾಧವ ಪೂಜಾರಿಯನ್ನು ಕೊಲೆಗೆ ಸಂಚು ರೂಪಿಸಿ ದ್ದನು. ಅದರಂತೆ 2016ರ ಮಾ.18ರಂದು ರಾತ್ರಿ ವೇಳೆ ನರಸಿಂಹ ನಾಯ್ಕಿ ಮನೆಯಲ್ಲಿ ಒಂಟಿಯಾಗಿದ್ದ ಮಾಧವ ಪೂಜಾರಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದನು.
ಬಳಿಕ ಹಣಕ್ಕಾಗಿ ಹುಡುಕಾಡಿದ ಆತ, ದೇವರ ಕೋಣೆಯಲ್ಲಿದ್ದ 500ರೂ. ನಾಣ್ಯ, ಚಿನ್ನದ ಸರ, ಉಂಗುರ, ಕ್ಯಾಮೆರಾಗಳನ್ನು ಕಳವು ಮಾಡಿ ಪರಾರಿ ಯಾಗಿದ್ದನು. ಮರುದಿನ ಬೆಳಗ್ಗೆ ಮೈಸೂರಿನಿಂದ ತಂದೆ ಮನೆಗೆ ಬಂದ ಮಗಳಿಂದಾಗಿ ಈ ಕೊಲೆ ಪ್ರಕರಣ ಬೆಳಕಿಗೆ ಬಂತು. ತನಿಖೆ ನಡೆಸಿದ ಪೊಲೀಸರು ಮೂರೇ ದಿನಗಳಲ್ಲಿ ಅಂದರೆ ಮೇ 22ರಂದು ಆರೋಪಿ ನರಸಿಂಹ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಅಂದಿನ ವೃತ್ತ ನಿರೀಕ್ಷಕ ಸುದರ್ಶನ್ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 20 ಮಂದಿ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿತು. ಆರೋಪಿ ಮೇಲಿನ ಆರೋಪ ರುಜುವಾತಾಗಿದ್ದರಿಂದ ಸೆಕ್ಷನ್ 392 ಪ್ರಕಾರ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 40,000ರೂ. ದಂಡ ಮತ್ತು ಸೆಕ್ಷನ್ 302 ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ 40,000ರೂ. ದಂಡ ವಿಧಿಸಿ ನ್ಯಾಯಾಧೀಶ ಪ್ರಕಾಶ ಖಂಡೇರಿ ತೀರ್ಪು ನೀಡಿದರು.
ದಂಡ ತಪ್ಪಿಸಿದಲ್ಲಿ ಎರಡೂ ಸೆಕ್ಷನ್‌ಗಳ ಪ್ರಕಾರ 1 ವರ್ಷ ಹೆಚ್ಚು ಕಾರಾಗೃಹ ಶಿಕ್ಷೆ ವಿಧಿಸುವಂತೆ ಆದೇಶ ತಿಳಿಸಲಾಗಿದೆ. ಪ್ರಕರಣದ ಬಗ್ಗೆ ಈ ಮೊದಲು ಸರಕಾರಿ ಅಭಿಯೋಜಕರಾಗಿದ್ದ ಶ್ರೀನಿವಾಸ ಹೆಗ್ಡೆ ಹಾಗೂ ಪ್ರಸ್ತುತ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.