×
Ad

ನಕಲಿ ರೇಷನ್ ಕಾರ್ಡ್ ಕುರಿತು ಸರಕಾರದಿಂದ ತಪ್ಪು ಅಂಕಿಅಂಶ: ಆರ್‌ಟಿಐ ವರದಿಯಿಂದ ಬಹಿರಂಗ

Update: 2017-08-10 22:20 IST

ಹೊಸದಿಲ್ಲಿ, ಆ.10: ನಕಲಿ ರೇಷನ್ ಕಾರ್ಡ್‌ಗಳ ಬಗ್ಗೆ ಕೇಂದ್ರ ಸರಕಾರ ನೀಡಿರುವ ಅಂಕಿಅಂಶ ಸರಿಯಾಗಿಲ್ಲ ಎಂಬುದು ಮಾಹಿತಿ ಹಕ್ಕು ಕಾಯ್ದೆ ಅರ್ಜಿ(ಆರ್‌ಟಿಐ)ಯಿಂದ ತಿಳಿದು ಬಂದಿದೆ.

 ಸಮಾಜ ಕಲ್ಯಾಣ ಯೋಜನೆಗಳಲ್ಲಿ ಹಣವನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸರಕಾರವು ಆಧಾರ್ ಸಂಖ್ಯೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದು ಒಟ್ಟು 3.95 ಕೋಟಿ ನಕಲಿ ರೇಷನ್ ಕಾರ್ಡ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು.

ಆದರೆ ಈ ಅಂಕಿಅಂಶವನ್ನು ಹೇಗೆ ಸಂಗ್ರಹಿಸಲಾಗಿದೆ ಎಂಬ ಬಗ್ಗೆ ಪ್ರಧಾನಮಂತ್ರಿ ಕಚೇರಿಯಾಗಲೀ, ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಾಗಲೀ ಅಥವಾ ರಾಜ್ಯ ಸರಕಾರವಾಗಲೀ ಮಾಹಿತಿ ನೀಡುತ್ತಿಲ್ಲ. ನಕಲಿ ರೇಷನ್ ಕಾರ್ಡ್‌ಗಳ ರಾಜ್ಯವಾರು ಅಂಕಿಅಂಶದ ಮಾಹಿತಿ ನೀಡಬೇಕೆಂದು ಹಾಗೂ ನಕಲಿ ರೇಷನ್ ಕಾರ್ಡ್‌ಗಳ ವಿವರ(ಹೆಸರು ಮತ್ತು ವಿಳಾಸ) ಒದಗಿಸಬೇಕೆಂದು ‘ಹಿಂದೂಸ್ತಾನ್ ಟೈಮ್ಸ್’ ಸುದ್ದಿಸಂಸ್ಥೆ 2017ರ ಮೇ 12ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿತ್ತು.

    ಒಂದೂವರೆ ತಿಂಗಳ ಬಳಿಕ 17 ರಾಜ್ಯಗಳು ಹಾಗೂ ಐದು ಕೇಂದ್ರಾಡಳಿತ ಪ್ರದೇಶಗಳು ಇದಕ್ಕೆ ಪ್ರತಿಕ್ರಿಯೆ ನೀಡಿವೆ. ಆಂಧ್ರಪ್ರದೇಶವು ನೀಡಿದ ಉತ್ತರದಲ್ಲಿ ವಿವಿಧ ಕಾರಣಗಳಿಗಾಗಿ 8,54,978 ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದರೆ, ಹರ್ಯಾಣ ರಾಜ್ಯದಲ್ಲಿ 2,83,635 ರೇಷನ್ ಕಾರ್ಡ್‌ಗಳಿವೆ. ಅಲ್ಲದೆ 11,49,988 ಫಲಾನುಭವಿಗಳು ರೇಷನ್ ಕೇಂದ್ರಗಳಲ್ಲಿ ನಕಲಿ / ಪುನರಾವರ್ತಿತ ಆಧಾರ್ ನಂಬರ್‌ಗಳನ್ನು ಹೊಂದಿದ್ದಾರೆ. ಆದ್ದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿರುವ ನಕಲಿ ರೇಷನ್ ಕಾರ್ಡ್‌ಗಳ ಕುರಿತ ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಲಾಗಿದೆ.

  ಶೇ.100ರಷ್ಟು ಮನೆ ಮನೆ ಪರಿಶೋಧನೆ ನಡೆಸಿದ ಬಳಿಕ 5,47,000 ನಕಲಿ ರೇಷನ್ ಕಾರ್ಡ್‌ಗಳು ಪತ್ತೆಯಾಗಿವೆ ಎಂದು ತಮಿಳುನಾಡು ತಿಳಿಸಿದೆ. ತಮ್ಮಲ್ಲಿ ನಕಲಿ ಕಾರ್ಡ್‌ಗಳೇ ಇಲ್ಲ ಎಂದು ಗೋವ ಮತ್ತು ಮೇಘಾಲಯ ರಾಜ್ಯಗಳು ತಿಳಿಸಿದ್ದರೆ, ಕೋರಿಕೆಯನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ ಎಂದು ಐದು ರಾಜ್ಯಗಳು ತಿಳಿಸಿವೆ. ಉತ್ತರಾಖಂಡ ಮತ್ತು ತ್ರಿಪುರ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.

      ಈ ಕೋರಿಕೆ ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಒಡಿಶಾದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಿಳಿಸಿದೆ. ಮಾಹಿತಿಯನ್ನು ಜಿಲ್ಲೆಗಳಿಂದ ನೇರವಾಗಿ ಪಡೆಯುವಂತೆ ಜಾರ್ಖಂಡ್ ಉತ್ತರಿಸಿದೆ. ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಮತ್ತು ದಿಲ್ಲಿ ರಾಜ್ಯಗಳಲ್ಲಿ ಒಟ್ಟು ಸೇರಿ 24,14,754 ನಕಲಿ ರೇಷನ್‌ಕಾರ್ಡ್‌ಗಳಿವೆ ಎಂದು ಮಾಹಿತಿ ನೀಡಲಾಗಿದೆ. ಆದರೆ ಈ ಮಾಹಿತಿ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ್ದೇ ಎಂಬುದರ ಬಗ್ಗೆ ಯಾವುದೇ ವಿವರ ನೀಡಲಾಗಿಲ್ಲ. ಯಾವುದೇ ನಕಲಿ ರೇಷನ್ ಕಾರ್ಡ್ ಇಲ್ಲ ಎಂದು ಚಂಡೀಗಡ, ಪುದುಚೇರಿ, ಲಕ್ಷದ್ವೀಪ , ದಿಯು ಮತ್ತು ದಾಮನ್ ತಿಳಿಸಿದ್ದರೆ, ತನ್ನಲ್ಲಿ 7,004 ನಿಷ್ಕ್ರಿಯ ರೇಷನ್ ಕಾರ್ಡ್‌ಗಳಿವೆ ಎಂದು ಅಂಡಮಾನ್ ಮತ್ತು ನಿಕೋಬಾರ್ ತಿಳಿಸಿದೆ.

   ಉತ್ತರಪ್ರದೇಶ, ರಾಜಸ್ತಾನ, ಅಸ್ಸಾಂ ಈ ಬಿಜೆಪಿ ಆಡಳಿತದ ರಾಜ್ಯಗಳಿಂದ ಯಾವುದೇ ಉತ್ತರ ಇದುವರೆಗೂ ಬಂದಿಲ್ಲ. ಆರ್‌ಟಿಐ ಕಾಯ್ದೆಯ ಪ್ರಕಾರ ಅರ್ಜಿ ಸ್ವೀಕರಿಸಿದ 30 ದಿನಗಳೊಳಗೆ ಉತ್ತರ ನೀಡಬೇಕಿದೆ. ಅರ್ಜಿಯ ಬಗ್ಗೆ ಹೆಚ್ಚಿನ ವಿವರಗಳು ಬೇಕಿದ್ದರೆ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಿಳಿಸಿದೆ. ಆದರೆ ಈ ವೆಬ್‌ಸೈಟ್‌ನಲ್ಲಿ 2016ರ ವರೆಗಿನ ಅವಧಿಗೆ ಸಂಬಂಧಿಸಿದಂತೆ ನಕಲಿ ರೇಷನ್ ಕಾರ್ಡ್‌ಗಳ ರಾಜ್ಯವಾರು ವಿಂಗಡಣೆ ನೀಡಲಾಗಿದೆ. ಆದರೆ ಆಧಾರ್ ಕಾರ್ಡ್ ಜೋಡಣೆಯ ಬಳಿಕ ಈ ಅಕ್ರಮ ಬೆಳಕಿಗೆ ಬಂದಿದೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಪ್ರಧಾನಮಂತ್ರಿಗಳ ಕಾರ್ಯಾಲಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಯಾವುದೇ ಇ-ಮೇಲ್ ಮಾಹಿತಿ ಅಥವಾ ದೂರವಾಣಿ ಕರೆಗಳಿಗೆ ಸ್ಪಂದಿಸುತ್ತಿಲ್ಲ .

 ಐದು ತಿಂಗಳಾದರೂ ತನ್ನ ಅರ್ಜಿಗೆ ಉತ್ತರ ಬಂದಿಲ್ಲ. ಯಾವ ಮಾಹಿತಿಯ ಆಧಾರದಲ್ಲಿ ಪ್ರಧಾನಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ತಿಳಿಸಲು ಸರಕಾರ ವಿಫಲವಾಗಿದೆ ಎಂದು ಇದೇ ರೀತಿಯ ಅರ್ಜಿ ಸಲ್ಲಿಸಿರುವ ‘ಸತರ್ಕ್ ನಾಗರಿಕ ಸಂಘಟನೆ’ಯ ಅಂಜಲಿ ಭಾರದ್ವಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News