×
Ad

ನೆಲಕ್ಕೆ ಬಿದ್ದ ಆಹಾರ ಹೆಕ್ಕಿ ಪ್ಯಾಕ್ ಮಾಡಿ ಮಾರಾಟ

Update: 2017-08-10 22:39 IST

ವಿಶಾಖಪಟ್ಟಣ, ಆ.10: ಸ್ವಚ್ಛಭಾರತ ಅಭಿಯಾನದ ಹೊರತಾಗಿಯೂ ದೇಶದಲ್ಲಿ ರೈಲ್ವೇ ನಿಲ್ದಾಣಗಳು ಇನ್ನೂ ಸ್ವಚ್ಛ ಪ್ರದೇಶವಾಗಿ ಮಾರ್ಪಾಟಾಗಿಲ್ಲ ಎಂದು ವರದಿಗಳು ಹೇಳುತ್ತಿವೆ. ಇದಕ್ಕೆ ಪುಷ್ಟಿ ನೀಡುವ ಪ್ರಕರಣವೊಂದು ವಿಶಾಖಪಟ್ಟಣ ರೈಲು ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿದೆ. ಇಲ್ಲಿಯ ರೈಲ್ವೇ ಫ್ಲಾಟ್‌ಪಾರ್ಮ್‌ನಲ್ಲಿ ರೈಲ್ವೇ ಕ್ಯಾಂಟೀನಿನ ಸಿಬ್ಬಂದಿ ನೆಲಕ್ಕೆ ಬಿದ್ದ ಆಹಾರವನ್ನು ಒಟ್ಟುಗೂಡಿಸಿ ಅವನ್ನು ಮತ್ತೆ ಪ್ಯಾಕ್ ಮಾಡಿ ಪ್ರಯಾಣಿಕರಿಗೆ ನೀಡುವ ವೀಡಿಯೊ ದೃಶ್ಯಾವಳಿ ವೈರಲ್ ಆಗಿದೆ.ಈ ಬಗ್ಗೆ ನ್ಯೂಸ್ ಮಿನಿಟ್ ವೀಡಿಯೊ ಸಹಿತ ವರದಿ ಮಾಡಿದೆ.

   ಪ್ಲಾಟ್‌ಫಾರ್ಮ್‌ನಲ್ಲಿ ನೆಲದ ಮೇಲೆ ಕುಳಿತಿರುವ ರೈಲ್ವೇ ಕ್ಯಾಂಟೀನಿನ ಮೂವರು ಸಿಬ್ಬಂದಿ ತಮ್ಮ ಸುತ್ತ ಆಹಾರದ ಪ್ಯಾಕೆಟ್ ತುಂಬಿದ್ದ ‘ಕ್ರೇಟ್’ಗಳನ್ನು ಇರಿಸಿಕೊಂಡಿದ್ದಾರೆ. ರೈಲ್ವೇಯ ಘೋಷಣೆ ಕೇಳಿಬರುತ್ತಿದ್ದಂತೆಯೇ ಈ ಮೂವರು ಅಲ್ಲಿ ನೆಲಕ್ಕೆ ಬಿದ್ದ ಆಹಾರವನ್ನು ಕೈಯಿಂದ ಬಾಚಿ ತೆಗೆದು ಅವನ್ನು ಮತ್ತೆ ಪ್ಯಾಕ್ ಮಾಡಿ ತಮ್ಮ ಬಳಿಯಿರುವ ‘ಕ್ರೇಟ್’ಗೆ ತುಂಬಿಸುತ್ತಾರೆ. ಅಲ್ಲದೆ ರೈಲ್ವೇ ಕ್ಯಾಂಟಿನ್ ಸಿಬ್ಬಂದಿ ಕೈಗವಸು ಹಾಕಿಕೊಳ್ಳದೆ ಆಹಾರ ವಸ್ತುಗಳನ್ನು ಪ್ರಯಾಣಿಕರಿಗೆ ಮಾರಾಟ ಮಾಡುತ್ತಿರುವುದನ್ನೂ ವೀಡಿಯೊ ದೃಶ್ಯಾವಳಿಯಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಈ ದೃಶ್ಯಾವಳಿಯ ಬಗ್ಗೆ ಹಲವಾರು ಮಂದಿ ಆಘಾತ ವ್ಯಕ್ತಪಡಿಸಿದ್ದಾರೆ.

  ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈಲ್ವೇ ಅಧಿಕಾರಿಗಳು, ರೈಲ್ವೇ ಕ್ಯಾಂಟೀನ್‌ನ ಪರವಾನಿಗೆ ಪಡೆದವರಿಗೆ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ. ಆದರೆ ಇದು ಹಳೆಯ ವೀಡಿಯೊ ದೃಶ್ಯಾವಳಿ ಎಂದೂ ಹೇಳಿಕೊಂಡಿದ್ದಾರೆ. ಪ್ರಕರಣದಲ್ಲಿ ಒಳಗೊಂಡಿರುವ ಸಿಬ್ಬಂದಿಯನ್ನು ಬದಲಿಸುವಂತೆ ತಿಳಿಸಲಾಗಿದೆ ಹಾಗೂ ಪರವಾನಿಗೆದಾರರಿಗೆ 8,000 ರೂ. ದಂಡ ವಿಧಿಸಲಾಗಿದೆ ಎಂದು ವಾಲ್ಟೈರ್ ರೈಲ್ವೇ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.

ಭಾರತೀಯ ರೈಲ್ವೇ ಇಲಾಖೆಯು ಮನುಷ್ಯನ ಸೇವನೆಗೆ ಯೋಗ್ಯವಲ್ಲದ ಆಹಾರವನ್ನು ಮಾರಾಟ ಮಾಡುತ್ತಿದೆ ಎಂದು ನಿಯಂತ್ರಕ ಮತ್ತು ಮಹಾಲೆಕ್ಕಪಾಲಕರು (ಸಿಎಜಿ) ವರದಿ ನೀಡಿದ ವಾರದೊಳಗೆ ಈ ವೀಡಿಯೊ ದೃಶ್ಯಾವಳಿ ಪ್ರಸಾರವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News