ಕಳವುಗೈದ ಮೊಬೈಲ್ ಮಾರಾಟಕ್ಕೆ ಯತ್ನ: ಮೂವರ ಸೆರೆ
ಮಂಗಳೂರು, ಆ. 10: ನಗರದ ಮಾರ್ಕೆಟ್ ರಸ್ತೆಯ ಲಾಡ್ಜ್‌ವೊಂದರ ಎದುರಿನ ರಸ್ತೆಬದಿಯಲ್ಲಿ ಕಳವುಗೈದ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುಹಮ್ಮದ್ ಇರ್ಫಾನ್ (25), ಸೈಯದ್ ಝುಬೇರ್ (22) ಹಾಗೂ ಝಮೀರ್ (42) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ರಾಮನಗರ ಜಿಲ್ಲೆಯ ಚನ್ನಪಟ್ನ ನಿವಾಸಿಗಳು. ಬಂಧಿತ ಆರೋಪಿಗಳಿಂದ 13 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದರ ಒಟ್ಟು ವೌಲ್ಯ 50,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳು ಮೊಬೈಲ್‌ಗಳನ್ನು ಜನನಿಬಿಡ ಸ್ಥಳಗಳಲ್ಲಿ ಕಳವುಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಾರಾಮ್, ಎ.ಎಸ್.ಐ. ದಯಾನಂದ, ಪದ್ಮನಾಭ ಹಾಗೂ ಸಿಬ್ಬಂದಿ ಜಾರ್ಜ್ ವ್ಯಾಲೆಸ್ಟಿನ್ ಡಿ ಸೋಜಾ, ವಾಸು ನಾಯ್ಕ, ಸುಜನ್ ಶೆಟ್ಟಿ, ಗೋವರ್ಧನ್, ವೆಂಕಟೇಶ್, ಅಂದಾನ್ ಸ್ವಾಮಿ ಭಾಗವಹಿಸಿದ್ದರು.