ಕಳೆದ ಜೂನ್ ಅಂತ್ಯದಲ್ಲಿ 682 ಬಟ್ಟೆ ಗಿರಣಿ ಬಂದ್: ಕೇಂದ್ರ ಸರಕಾರ
ಹೊಸದಿಲ್ಲಿ, ಆ.10: ಈ ವರ್ಷದ ಜೂನ್ ಅಂತ್ಯದಲ್ಲಿ 682ಕ್ಕೂ ಅಧಿಕ ಬಟ್ಟೆ ಗಿರಣಿಗಳು ಬಾಗಿಲು ಮುಚ್ಚಿವೆ. ಇವುಗಳಲ್ಲಿ ತಮಿಳುನಾಡಿಲ್ಲೇ 232 ಬಟ್ಟೆ ಗಿರಣಿಗಳು ಬಂದ್ ಆಗಿವೆ ಎಂದು ಕೇಂದ್ರ ಸರಕಾರ ಇಂದು ತಿಳಿಸಿದೆ. ದೇಶದಲ್ಲಿ ಜೂನ್ ವರೆಗೆ 1,399 ಬಟ್ಟೆ ಗಿರಣಿಗಳು ಕಾರ್ಯಾಚರಿಸುತ್ತಿದ್ದುವು. ಜೂನ್ ಅಂತ್ಯದಲ್ಲಿ 682 ಬಟ್ಟೆ ಗಿರಣಿಗಳು ಬಾಗಿಲು ಮುಚ್ಚಿದವು ಎಂದು ಶೂನ್ಯ ವೇಳೆಯಲ್ಲಿ ಜವಳಿ ಖಾತೆ ಸಚಿವ ಸ್ಮೃತಿ ಇರಾನಿ ಲೋಕಸಭೆಗೆ ತಿಳಿಸಿದರು.
ಇವುಗಳಲ್ಲಿ ತಮಿಳುನಾಡಿನ 232, ಮಹಾರಾಷ್ಟ್ರದ 85, ಉತ್ತರಪ್ರದೇಶದ 60 ಹಾಗೂ ಹರ್ಯಾಣದಲ್ಲಿ 42ಕ್ಕಿಂತಲೂ ಹೆಚ್ಚು ಬಟ್ಟೆ ಗಿರಣಿಗಳು ಬಾಗಿಲು ಹಾಕಿಕೊಂಡಿವೆ ಎಂದು ಅವರು ತಿಳಿಸಿದರು.
ಈ ಸರಕಾರದ ಸಂದರ್ಭ ಬಟ್ಟೆ ಗಿರಣಿಗಳು ದೊಡ್ಡ ಮೊತ್ತದ ವಿದೇಶಿ ನೇರ ಹೂಡಿಕೆ ಕಂಡಿವೆ. ಸರಕು ಹಾಗೂ ಸೇವಾ ತೆರಿಗೆ ಮತ್ತು ಕಾರ್ಮಿಕರ ಸುಧಾರಣೆಗಳನ್ನು ಬಟ್ಟೆ ಗಿರಣಿಗಳು ಸ್ವಾಗತಿಸಿದ್ದವು ಎಂದು ಅವರು ಹೇಳಿದರು. ನೂತನ ಬಟ್ಟೆ ಗಿರಣಿಗಳನ್ನು ಆರಂಭಿಸಲು ಸರಕಾರ ಯೋಜನೆ ರೂಪಿಸಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರೂಪಿಸಲಾಗಿದೆ ಎಂದರು.