ಕಾವ್ಯಾ ಪೂಜಾರಿ ಪ್ರಕರಣ: ತನಿಖೆಗೆ ಏಳು ಸಮಿತಿ - ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್
ಮಂಗಳೂರು, ಆ. 10: ವಿ.ಎಸ್. ಉಗ್ರಪ್ಪ ನೇತೃತ್ವದ ಮಹಿಳಾ ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ ನಿಯಂತ್ರಣ ಸಮಿತಿ ನೀಡಿರುವ ಸೂಚನೆಯಂತೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಅಸಹಜ ಸಾವಿನ ಹಿನ್ನೆಲೆ ಸೇರಿದಂತೆ ಸಮಗ್ರ ತನಿಖೆಗೆ ಏಳು ಸಮಿತಿಗಳನ್ನು ರಚಿಸಿ ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ಆದೇಶಿಸಿದ್ದಾರೆ.
ಆಳ್ವಾಸ್ ಸಂಸ್ಥೆಯ ವಿವಿಧ ವಿಷಯಗಳ ತನಿಖೆಗೆ ಐದು ಸಮಿತಿಗಳು, ಬೆಳ್ತಂಗಡಿಯಲ್ಲಿ ಅತೀ ಹೆಚ್ಚು ಅಸಹಜ ಪ್ರಕರಣಗಳ ತನಿಖೆ ಮತ್ತು ಮಕ್ಕಳ ಲಿಂಗಾನುಪಾತದ ಏರುಪೇರು ಕುರಿತು ತನಿಖೆಗಾಗಿ ಸಮಿತಿಗಳನ್ನು ರಚಿಸಲಾಗಿದ್ದು, ಒಂದು ತಿಂಗಳಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯವರು ವಿದ್ಯಾಸಂಸ್ಥೆ ನಡೆಸಲು ಅನುಮತಿ ಪಡೆದು, ವಸತಿ ಶಾಲೆ ನಡೆಸುತ್ತಿರುವುದು ಕಾನೂನುಬಾಹಿರ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿ, ಜಿಲ್ಲಾಡಳಿತವು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಧ್ಯಕ್ಷರಾಗಿರುವ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಸದಸ್ಯರಾಗಿರುವ ಸಮಿತಿ ರಚಿಸಿ, ಒಂದು ತಿಂಗಳ ಒಳಗಾಗಿ ವರದಿ ನೀಡುವಂತೆ ಆದೇಶಿಸಿದೆ.
ಆಳ್ವಾಸ್ ಸಂಸ್ಥೆ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳಿಗೆ ಸೂಕ್ತ ವ್ಯವಸ್ಥೆ ಅಳವಡಿಸಿಲ್ಲ, ಅಗ್ನಿ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆಕ್ಷೇಪಿಸಿತ್ತು. ಇವು ಕಟ್ಟಡ ನಿರ್ವಹಣಾ ನಿಯಮವಾಳಿಗಳ ಉಲ್ಲಂಘನೆಯಾಗಿದೆ ಎಂದು ಹೇಳಿ ಈ ಕುರಿತು ವಿವರಣೆ ಕೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಯೋಜನೆ ಸಹಾಯಕ ನಿರ್ದೇಶಕರು ಅಧ್ಯಕ್ಷರಾಗಿರುವ ಅಗ್ನಿಶಾಮಕ ದಳದ ಮುಖ್ಯಾಧಿಕಾರಿ, ತಾಲೂಕು ಪಂಚಾಯತ್ ಇಒ ಹಾಗೂ ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ ಮತ್ತು ಪುತ್ತಿಗೆ ಗ್ರಾಮ ಪಂಚಾಯತ್ ಪಿಡಿಒ ಸದಸ್ಯರಾಗಿರುವ ಸಮಿತಿ ರಚಿಸಿ ತನಿಖೆ ನಡೆಸಲು ಆದೇಶ ನೀಡಿದೆ.
ಸಂಸ್ಥೆಯಲ್ಲಿ ಸುಮಾರು 26 ಸಾವಿರ ವಿದ್ಯಾರ್ಥಿಗಳು ಕಲಿಯುತಿತಿದ್ದು, ನಾಲ್ಕು ಸಾವಿರದಷ್ಟು ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಉಳಿದ 22 ಸಾವಿರದಷ್ಟು ವಿದ್ಯಾರ್ಥಿಗಳು ವಾರ್ಷಿಕ ಒಂದು ಲಕ್ಷ ರೂ. ಶುಲ್ಕ ಪಾವತಿಸುತ್ತಿದ್ದಾರೆ. ಈ ಶುಲ್ಕ ನಿಯಂತ್ರಣ ಯಾರು ಮಾಡುತ್ತಿದ್ದಾರೆ? ಇದರ ಬಗ್ಗೆ ಜಿಲ್ಲಾಡಳಿತ ಏನು ಕ್ರಮ ಕೈಗೊಂಡಿದೆ? ಎಂದು ಉಗ್ರಪ್ಪ ಸಮಿತಿ ಪ್ರಶ್ನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಂಗಳೂರು ವಿವಿ ರಿಜಿಸ್ಟ್ರಾರ್ ಅಧ್ಯಕ್ಷತೆಯಲ್ಲಿ ದ.ಕ. ಜಿಪಂ ಉಪಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಸದಸ್ಯರಾಗಿರುವ ಸಮಿತಿ ರಚಿಸಿದೆ.
ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಕಾಯಿದೆಯಡಿ 10 ಮಂದಿ ನೌಕರರಿಗಿಂತ ಹೆಚ್ಚು ಸಿಬ್ಬಂದಿ ಇರುವ ಕಡೆ ರಚಿಸಬೇಕಿದ್ದ ಆಂತರಿಕ ದೂರು ನಿರ್ವಹಣಾ ಸಮಿತಿ ರಚನೆಗೊಂಡಿದೆಯೇ ಇಲ್ಲವೇ? ಇದ್ದರೆ ಅದು ಕ್ರಿಯಾಶೀಲವಾಗಿದೆಯೇ ಅನ್ನುವ ಕುರಿತು ಮಂಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಆದೇಶ ನೀಡಲಾಗಿದೆ.
ಉಳಿದಂತೆ ಬೆಳ್ತಂಗಡಿ ತಾಲೂಕಿನಲ್ಲಿ ಅತಿ ಹೆಚ್ಚು ಅಸಹಜ ಸಾವುಗಳು ಸಂಭವಿಸುತ್ತಿದ್ದು, ಈ ಕುರಿತಂತೆ ಸಮಗ್ರ ಅಧ್ಯಯನಕ್ಕಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರುಪೇರಾಗುತ್ತಿರುವ ಲಿಂಗಾನುಪಾತ ಕುರಿತು ವೈಜ್ಞಾನಿಕ ಕಾರಣಗಳ ಅನ್ವೇಷಣೆಗಾಗಿಯೂ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.