ಜಾನುವಾರು ಮಾರಾಟ ನಿರ್ಬಂಧ:ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆಯಲ್ಲಿ ಹಸ್ತಕ್ಷೇಪಕ್ಕೆ ಸುಪ್ರೀಂ ನಕಾರ
ಹೊಸದಿಲ್ಲಿ, ಆ.11: ಮಾರುಕಟ್ಟೆಯಲ್ಲಿ ಜಾನುವಾರುಗಳನ್ನು ಹತ್ಯೆ ಮಾಡುವ ಉದ್ದೇಶದಿಂದ ಮಾರಾಟ ಮಾಡುವ ಅಥವಾ ಖರೀದಿಸುವುದಕ್ಕೆ ನಿರ್ಬಂಧ ವಿಧಿಸಿರುವ ಕೇಂದ್ರ ಸರಕಾರದ ಅಧಿಸೂಚನೆಗೆ ಮದ್ರಾಸ್ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಆದರೆ, ತಾನು ಈ ಹಿಂದೆ ನೀಡಿದ್ದ ಆದೇಶವನ್ನು ಪರಿಷ್ಕರಿಸಿದ ನ್ಯಾಯಾಲಯ, ಪ್ರಾಣಿಹಿಂಸೆ ತಡೆ ಕಾಯ್ದೆ (ಪ್ರಕರಣದಲ್ಲಿ ವಶಪಡಿಸಿಕೊಂಡ ಪ್ರಾಣಿಗಳ ನಿಯಮ-2017)ಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.
ಇದರಿಂದ ಜಾನುವಾರು ಮಾರುಕಟ್ಟೆ ಆದೇಶವನ್ನು 22ನೇ ವಿಧಿ(ಮದ್ರಾಸ್ ಹೈಕೋರ್ಟ್‌ನ ಮಧುರೈ ನ್ಯಾಯಪೀಠ ತಡೆಯಾಜ್ಞೆ ನೀಡಿದೆ)ಯನ್ನು ಹೊರತುಪಡಿಸಿ ಜಾರಿಗೊಳಿಸಬಹುದಾಗಿದೆ.
ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅರ್ಜಿಯನ್ನು ವಿಲೇವಾರಿಗೊಳಿಸುತ್ತೇವೆ. ಮದ್ರಾಸ್ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಹಾಗೆಯೇ ಇರುತ್ತದೆ. ಅದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜೆೆ.ಎಸ್.ಖೇಹರ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿತು.ಸರಕಾರ ಹೊಸ ನಿಯಮಗಳನ್ನು ಪ್ರಕಟಿಸಿದಾಗ ಮಾತ್ರ ಹೊಸ ಉಪಕ್ರಮದ ಅಗತ್ಯವಿದೆ. ಆಗ ತನ್ನನ್ನು ಸಂಪರ್ಕಿಸುವಂತೆ ಸಂಬಂಧಿತ ಪಕ್ಷಗಳಿಗೆ ನ್ಯಾಯಾಲಯ ತಿಳಿಸಿತು.
ಜಾನುವಾರು ಮಾರುಕಟ್ಟೆ ಅಧಿಸೂಚನೆಯ 22ನೇ ವಿಧಿ( ಹತ್ಯೆಗಾಗಿ ಮಾರುಕಟ್ಟೆಯಲ್ಲಿ ಜಾನುವಾರು ಮಾರಾಟ ಮತ್ತು ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದೆ)ಗೆ ಮಾತ್ರ ತಡೆಯಾಜ್ಞೆ ವಿಧಿಸಲಾಗಿದೆ. ಈ ವಿಧಿಯನ್ನು ಹೊರತುಪಡಿಸಿ, ಕಾಯ್ದೆಯ ಉಳಿದ ನಿಯಮಗಳನ್ನು ಜಾರಿಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ವಿವಿಧ ಮೂಲಗಳಿಂದ ವ್ಯಕ್ತವಾಗಿರುವ ಆಕ್ಷೇಪಗಳನ್ನು ಸರಕಾರ ಪರಿಶೀಲಿಸುತ್ತಿದ್ದು , ನಿಯಮವನ್ನು ಕೂಲಂಕುಷವಾಗಿ ಪರಿಶೋಧಿಸಿದ ಬಳಿಕ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹಯ್ಯ ಹೇಳಿದರು.
ಪ್ರಾಣಿಹಿಂಸೆ ತಡೆ ಕಾಯ್ದೆಯು ನಿಷೇಧ (ಪ್ರತಿಬಂಧ) ಎಂಬ ಕರಾರನ್ನು ಹೊಂದಿಲ್ಲ ಎಂದು ಅರ್ಜಿದಾರರೊಬ್ಬರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ನ್ಯಾಯಪೀಠಕ್ಕೆ ತಿಳಿಸಿದರು.