ಅತ್ಯಾಚಾರ ಪ್ರಕರಣ: ಅಪರಾಧಿಗೆ ಶಿಕ್ಷೆ
ಮಂಗಳೂರು, ಆ. 11: ಪ್ರೇಯಸಿ ಮೇಲೆ ಅತ್ಯಾಚಾರ ನಡೆಸಿ ಆಕೆಯ ಅಶ್ಲೀಲ ಫೊಟೊಗಳನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಆರೋಪದಲ್ಲಿ ಅಪರಾಧಿಯೋರ್ವನಿಗೆ ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 1 ವರ್ಷ ಆರು ತಿಂಗಳು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸುಳ್ಯ ಅಲೆಟ್ಟಿ ಮೊರಂಗಲ್ಲು ನಿವಾಸಿ ಕುಸುಮಾಧರ (30) ಶಿಕ್ಷೆಗೊಳಗಾದ ಅಪರಾಧಿ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಕುಸುಮಾಧರ್‌ಗೆ ಸುಳ್ಯದ ನಿವಾಸಿ ಯುವತಿಯೊಬ್ಬಳು ಸಮಾರಂಭವೊಂದರಲ್ಲಿ ಪರಿಚಯವಾಗಿತ್ತು. ಆಕೆಯ ಜತೆ ಮಾತನಾಡುವಾಗ ಬೆಂಗಳೂರಿನಲ್ಲಿ ಕೆಲಸಕ್ಕಿರುವುದಾಗಿ ನಂಬಿಸಿದ್ದ. ಈ ಸಂದರ್ಭ ಇಬ್ಬರಲ್ಲೂ ಆತ್ಮೀಯತೆ ಬೆಳೆದಿತ್ತು. ಇಬ್ಬರೂ ತಮ್ಮ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಂಡಿದ್ದರು. ಇಬ್ಬರೂ ಫೋನ್‌ನಲ್ಲಿ ಮಾತನಾಡುತ್ತಾ ಆತ್ಮೀಯತೆ ಪ್ರೇಮಕ್ಕೆ ತಿರುಗಿತ್ತು. ಯುವತಿ ಕೆಲಸಕ್ಕೆ ಹೋಗುತ್ತಿದ್ದರಿಂದ ಪಂಜದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು.
2013 ಎ.14ರಂದು ಕುಸುಮಾಧರ ಆಕೆಯನ್ನು ಭೇಟಿಯಾಗಲೆಂದು ಯುವತಿಯ ಬಾಡಿಗೆಯ ಮನೆಗೆ ಬಂದಿದ್ದ. ಸಂಜೆ ಹೊತ್ತು ಬಸ್ ಸಿಗಲಿಲ್ಲ ಎಂದು ನೆಪ ಹೇಳಿ ಆಕೆಯ ಬಾಡಿಗೆಯ ಮನೆಯಲ್ಲೇ ವಾಸ್ತವ್ಯ ಹೂಡಿದ್ದ. ಬಳಿಕ ಆಕೆಯನ್ನು ಅತ್ಯಾಚಾರ ನಡೆಸಿದ್ದ. ಅತ್ಯಾಚಾರದ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಸ್ವಲ್ಪ ದಿನದ ಬಳಿಕ ಕುಸುಮಾಧರ ಆಕೆಯನ್ನು ಬ್ಲಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದು, ನನ್ನ ಬಳಿ ನಿನ್ನ ಅಶ್ಲೀಲ ವೀಡಿಯೋಗಳಿವೆ. ನೀನು 5 ಲಕ್ಷ ರೂ. ಹಣ ನೀಡಬೇಕು. ಇಲ್ಲದಿದ್ದರೆ ಅದನ್ನು ಫೇಸ್‌ಬುಕ್‌ಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಾನೆ. ಆದರೆ ಯುವತಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಯುವಕ 2013 ಜೂ.17ರಂದು ಫೇಸ್‌ಬುಕ್ ಅಕೌಂಟ್ ಓಪನ್ ಮಾಡಿ ಅದರಲ್ಲಿ ಅಶ್ಲೀಲ ವಿಡಿಯೋ ತುಣುಕುಗಳನ್ನು ಅಪ್‌ಲೋಡ್ ಮಾಡಿದ್ದ. ಇದು ಯುವತಿಯ ಸಂಬಂಧಿಕರಿಗೆ ಗೊತ್ತಾಗಿ ಯುವತಿಯು ಈ ಬಗ್ಗೆ ಜೂ.19ರಂದು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡ ಅಂದಿನ ಸುಳ್ಯ ಠಾಣಾ ಇನ್‌ಸ್ಪೆಕ್ಟರ್ ಸತೀಶ್ ಈ ಬಗ್ಗೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಕ್ರೈಂ ಸೇರಿದಂತೆ 19 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಅಲ್ಲದೆ ಮೊಬೈಲ್ ದಾಖಲೆ, ಎಫ್‌ಎಸ್‌ಎಲ್ ವರದಿ ಸೇರಿದಂತೆ 26 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.
ಅಪರಾಧಿಗೆ ಐಪಿಸಿ 292(2ಎ) ಅನ್ವಯ 6 ತಿಂಗಳು ಸಜೆ ಮತ್ತು 2 ಸಾವಿರ ರೂ. ದಂಡ, ಐಪಿಸಿ 67(ಎ)ಯನ್ವಯ 1ವರ್ಷ ಸಜೆ ಮತ್ತು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶ ಡಿ.ಟಿ. ಪುರಂದರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸಂತ್ರಸ್ತ ಯುವತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದೆಂದೂ ನ್ಯಾಯಾಲಯ ಹೇಳಿದೆ. ಸರಕಾರದ ಪರವಾಗಿ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು.