ಭೂತಾನ್ ವಿದೇಶ ಸಚಿವರೊಂದಿಗೆ ಸುಶ್ಮಾ ಮಾತುಕತೆ

Update: 2017-08-11 16:51 GMT

ಕಠ್ಮಂಡು, ಆ. 11: ಕಠ್ಮಂಡುವಿನಲ್ಲಿ ಶುಕ್ರವಾರ ನಡೆದ ‘ಬಿಮ್‌ಸ್ಟೆಕ್’ ಸಚಿವ ಮಟ್ಟದ ಸಮ್ಮೇಳನದ ನೇಪಥ್ಯದಲ್ಲಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮತ್ತು ಭೂತಾನ್ ವಿದೇಶ ವ್ಯವಹಾರಗಳ ಸಚಿವ ಡಮ್ಚಾ ದೊರ್ಜಿ ಡೋಕಾ ಲದಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ನೆಲೆಸಿರುವ ಬಿಕ್ಕಟ್ಟಿನ ಬಗ್ಗೆ ಮಾತುಕತೆ ನಡೆಸಿದರು.

ಸಿಕ್ಕಿಂ ಗಡಿಯಲ್ಲಿ ಜೂನ್ ಮಧ್ಯ ಭಾಗದಲ್ಲಿ ಬಿಕ್ಕಟ್ಟು ಆರಂಭಗೊಂಡ ಬಳಿಕ ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಮಾತುಕತೆ ನಡೆದಿರುವುದು ಇದೇ ಮೊದಲ ಬಾರಿಯಾಗಿದೆ.

ಬಿಕ್ಕಟ್ಟಿಗೆ ಸಂಬಂಧಿಸಿ ತಮ್ಮ ತಮ್ಮ ದೇಶಗಳು ತೆಗೆದುಕೊಂಡಿರುವ ನಿಲುವು ಹಾಗೂ ಬಿಕ್ಕಟ್ಟನ್ನು ಕೊನೆಗೊಳಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಸ್ವರಾಜ್ ಮತ್ತು ದೊರ್ಜಿ ಮುಖ್ಯವಾಗಿ ಚರ್ಚಿಸಿದರು.

‘‘ಡೋಕಾ ಲದಲ್ಲಿ ಈಗ ನೆಲೆಸಿರುವ ಬಿಕ್ಕಟ್ಟನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲಾಗುವುದು ಎಂಬ ಭರವಸೆ ನಮಗಿದೆ’’ ಎಂದು ಸಭೆಯ ಬಳಿಕ ಮಾತನಾಡಿದ ದೊರ್ಜಿ ಹೇಳಿದರು. ‘‘ಮಾತುಕತೆಯಲ್ಲಿ ಯಾವುದೇ ಫಲಿತಾಂಶ ಬಂದರೂ ಉಭಯ ಪಕ್ಷಗಳು ತೃಪ್ತಿ ಹೊಂದಬೇಕು’’ ಎಂದು ಅವರು ಹೇಳಿದರು. ಆದರೆ, ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News