ಪಠ್ಯದಲ್ಲಿ ಸೈನಿಕರ ವಿರೋಧಿ ಲೇಖನ : ಎಬಿವಿಪಿ ಪ್ರತಿಭಟನೆ
ಪುತ್ತೂರು,ಆ.12: ಮಂಗಳೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯ ಬಿಸಿಎ ಕನ್ನಡ ಪಠ್ಯಪುಸ್ತಕದಲ್ಲಿ ಸೈನಿಕರ ಅವಹೇಳನ ಮಾಡುವ, ದೇಶಪ್ರೇಮವನ್ನೇ ಪ್ರಶ್ನೆ ಮಾಡುವ ಲೇಖನವನ್ನು ಅಳವಡಿಸಲಾಗಿದ್ದು, ಈ ಲೇಖನವನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಶನಿವಾರ ಪುತ್ತೂರಿನ ನೆಹರು ನಗರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಲೇಖನವನ್ನು ಪಠ್ಯ ಪುಸ್ತಕದಿಂದ ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಥಮ ವರ್ಷದ ಬಿಸಿಎ ಕನ್ನಡ ಪಾಠದಲ್ಲಿ `ಯುದ್ದ ಒಂದು ಉದ್ಯಮ' ಎಂಬ ಲೇಖನವನ್ನು ಪಠ್ಯವಾಗಿ ಅಳವಡಿಸಲಾಗಿದೆ. ಈ ಬರಹ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಸೂಕ್ತವಲ್ಲ, ಹೀಗಾಗಿ ತಕ್ಷಣವೇ ಈ ಪಾಠವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡ ಸಂದೇಶ್ ಅವರು ವಿದ್ಯಾರ್ಥಿಗಳಿಗೆ ದೇಶಪ್ರೇಮದ ಬಗ್ಗೆ ತಿಳಿಸುವ ಪಾಠಬೇಕಾಗಿತ್ತು, ಅದರ ಬದಲಾಗಿ ಲೇಖಕರು ದೇಶದ ಬಗ್ಗೆ, ದೇಶಪ್ರೇಮದ ಬಗ್ಗೆ , ಸೈನಿಕರ ಬಗ್ಗೆ ಇರುವಂತಹ ನಂಬಿಕೆಯನ್ನೇ ಪ್ರಶ್ನೆ ಮಾಡಿರುವುದು ಸರಿಯಲ್ಲ. ಹೀಗಾಗಿ ಈ ಪಾಠ ವಿದ್ಯಾರ್ಥಿಗಳಿಗೆ ಬೇಡವಾಗಿದ್ದು, ಇದನ್ನು ಪಠ್ಯದಿಂದ ಕೈಬಿಡಬೇಕೆಂದು ಆಗ್ರಹಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡ ವಿಜೇತ್ ಅವರು ಮಾತನಾಡಿ, ಭಾರತವು ಎಂದೂ ಸೈನಿಕರ ಬಗ್ಗೆ ಕೀಳಾಗಿ ಕಂಡಿಲ್ಲ, ಕಾಣುವುದೂ ಇಲ್ಲ. ಸೈನಿಕರ ಮನೆಯವರನ್ನೂ ಗೌರವದಿಂದ ಕಾಣುತ್ತದೆ. ಆದರೆ ಈ ಲೇಖಕಕರ ಬರಹವೇ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ನೀಡುತ್ತದೆ. ವಿಶ್ವವಿದ್ಯಾನಿಲಯದ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಬೇಜಾವಾಬ್ದಾರಿಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶ ಕಾಯುವ ಸೈನಿಕರು ಅತ್ಯಾಚಾರಿಗಳು ಎಂಬ ಭಾವನೆ ಮೂಡುವಂತಾಗಿದೆ. ದೇಶಪ್ರೇಮದ ಬಗ್ಗೆ ತಪ್ಪು ಅರ್ಥ ಬರುವಂತಾಗಿದೆ ಎಂದರು. ಹೀಗಾಗಿ ತಕ್ಷಣವೇ ಈ ಪಾಠವನ್ನು ಕೈಬಿಡಬೇಕು ಎಂದು ಆಗ್ರಹಿಸಿದ ಅವರು ಒಂದು ವೇಳೆ ಈ ಪಾಠವನ್ನು ತೆಗೆಯದೇ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಮುಖರಾದ ರಾಧೇಶ್, ಲಕ್ಷ್ಮೀಶ, ಹೃಷಿಕೇಶ್ ಶೆಟ್ಟಿ, ಮನೀಶ ಹಾಗೂ ಪ್ರಕೃತಿ, ಶಾಶ್ವತ್ ಮಾತನಾಡಿದರು.
ಪ್ರತಿಭಟನೆಯ ಬಳಿಕ ವಿದ್ಯಾರ್ಥಿಗಳು ಈ ಲೇಖನವನ್ನು ಪಠ್ಯ ಪುಸ್ತಕದಿಂದ ಕೈಬಿಡಬೇಕೆಂದು ಆಗ್ರಹಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.