ಹರೇಕಳ ಶಾಲೆಯಲ್ಲಿ ಕೃಷಿ, ಪಾರಂಪರ್ಯ ಆಯುರ್ವೇದ ಪದ್ದತಿ ಕಾರ್ಯಕ್ರಮ
ಕೊಣಾಜೆ,ಆ.12: ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಮಿತಿಯಿಂದ ವೆಲೆನ್ಸಿಯಾ ತ್ರಿವೇಣಿ ಆಯುರ್ವೇದದ ಸಹಕಾರದಲ್ಲಿ ಗುರುವಾರ ಹರೇಕಳದ ಶ್ರೀ ರಾಮಕೃಷ್ಣ ಶಾಲೆಯಲ್ಲಿ ಕೃಷಿ ಮಾಹಿತಿ ಹಾಗೂ ‘ಪಾರಂಪರ್ಯ ಆಯುರ್ವೇದ ಪದ್ದತಿಯಲ್ಲಿ ಆರೋಗ್ಯ ರಕ್ಷಣೆ’ ವಿಷಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಎಷ್ಟು ದೊಡ್ಡ ವಿದ್ಯಾವಂತರಾಗಿರಲಿ, ವೈದ್ಯ, ಇಂಜಿನಿಯರ್, ವಿಜ್ಞಾನಿಯೂ ಆಗಿರಲಿ. ಅನ್ನ ಇಲ್ಲದೆ ಬದುಕಿ ತೋರಿಸುತ್ತೇವೆ ಎನ್ನಲ್ಲ. ಅನ್ನ ಬೇಕಾದರೆ ರೈತರು ಗದ್ದೆಗಿಳಿಯಲೇ ಬೇಕು. ಆದರೆ ಇಂದು ಜನರು ನಗರದತ್ತ ವಲಸೆ ಹೋಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿನ ಗದ್ದೆಗಳು ಹಡೀಲು ಬೀಳುತ್ತಿದೆ ಎಂದರು.
ಇಂದಿನ ಆಧುನಿಕ ಆಹಾರ ಪದ್ದತಿ, ಪೊಟ್ಟಣಗಳು, ಹಾಲು, ಶೀಘ್ರ ಬೆಳವಣಿಗೆಗೆ ಬಳಸುವ ಆಹಾರ, ಪೇಸ್ಟ್, ಬುದ್ಧಿ ಶಕ್ತಿ ಶೀಘ್ರ ಹೆಚ್ಚಾಗಲು ಬಳಸುವ ಆಹಾರ ಎಳೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. 16 ವರ್ಷದ ಬಳಿಕ ಹೆಣ್ಮಕ್ಕಳಲ್ಲಿ ಆಗಬೇಕಾದ ಬೆಳವಣಿಗೆ ಮೂರು ವರ್ಷದ ಹೆಣ್ಮಕ್ಕಳಲ್ಲಿ ಕಂಡು ಬರುತ್ತಿದೆ. 20 ವರ್ಷ ಬಳಿಕ ಬರಬೇಕಿದ್ದು ಲೈಂಗಿಕ ಬಯಕೆ ಆರು ವರ್ಷದಲ್ಲೇ ಕಾಣಲು ಸಾಧ್ಯವಾಗುತ್ತಿದ್ದು ಗಂಭೀರ ಸಮಸ್ಯೆಯಾಗಿದೆ ಎಂದರು.
ವಿದ್ಯಾರ್ಥಿಗಳು ಮಾತೃ ಭಾಷೆಯನ್ನು ಎಂದೂ ಮರೆಯಕೂಡದು.
ಪತ್ರಕರ್ತ ಅನ್ಸಾರ್ ಇನೋಳಿ ಮಾತನಾಡಿ, ಆಧುನಿಕತೆಯ ನೆಪದಲ್ಲಿ ಇಂಗ್ಲೀಷ್‍ಗೆ ಮಾರು ಹೋಗಿರುವ ವಿದ್ಯಾರ್ಥಿಗಳು ಮನೆಯಲ್ಲಿಯಾದರೂ ತಾಯಿ ಭಾಷೆಯನ್ನು ಶುದ್ಧವಾಗಿ ಮಾತನಾಡಲು ಅಭ್ಯಾಸ ಮಾಡಿಕೊಳ್ಳಬೇಕು. ಪೇಟೆಯಲ್ಲಿ ಸಿಗುವ ಬೇಕರಿ ಸಿಹಿ ಪದಾರ್ಥ ತಿಂದು ಬಾಯ್ಲರ್ ಕೋಳಿ ರೀತಿಯಲ್ಲಿ ಮೈ ಬೆಳೆಸಿಕೊಳ್ಳುವುದಕ್ಕಿಂತ ಹಳ್ಳಿಯಲ್ಲಿ ಕಾಣಸಿಗುವ ಆಯುರ್ವೇದ ಗಿಡಮೂಲಿಕೆಯ ಸತ್ವಗುಣವನ್ನು ಇವತ್ತಿನ ಸಂಪನ್ಮೂಲ ವ್ಯಕ್ತಿಯಾದ ಬ್ರದರ್ ಎಲ್‍ದೋ ಅವರಿಂದ ತಿಳಿದುಕೊಂಡು ಆಹಾರಭ್ಯಾಸವನ್ನಾಗಿ ಉಪಯೋಗಿಸುವುದರಿಂದ ಸದೃಢ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವೆಂದರು.
ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಹರೇಕಳ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಸ್ವಾಗತಿಸಿದರು. ಶಿಕ್ಷಕಿ ಮೋಹಿನಿ ವಂದಿಸಿದರು. ಶಿಕ್ಷಕ ಕೃಷ್ಣಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.