×
Ad

ನ.24ರಿಂದ 26: ಉಡುಪಿಯಲ್ಲಿ ಧರ್ಮಸಂಸತ್ ಅಧಿವೇಶನ

Update: 2017-08-12 21:05 IST

ಉಡುಪಿ, ಆ. 12: ವಿಶ್ವ ಹಿಂದೂ ಪರಿಷತ್ತಿನ ನೇತೃತ್ವದಲ್ಲಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮುಂದಿನ ನ.24ರಿಂದ 26ರವರೆಗೆ ನಡೆಯುವ ಧರ್ಮ ಸಂಸತ್ ಅಧಿವೇಶನದಲ್ಲಿ ದೇಶದಾದ್ಯಂತದಿಂದ 2,500ರಿಂದ 3,000 ಮಂದಿ ಸಂತರು, ಮಹಂತರು, ಮಹಾಮಂಡಲೇ್ವರರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮೂರನೆಯ ಪರ್ಯಾಯದ ಸಂದರ್ಭದಲ್ಲಿ (1984-85) ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ಅಧಿವೇಶನದಲ್ಲಿ ಅಯೋಧ್ಯೆರಾಮಮಂದಿರದ ಬೀಗ ತೆಗೆಯಬೇಕೆಂದು ನಿರ್ಣಯ ಕೈಗೊಂಡಿದ್ದರೆ (ಕೆಲವೇ ದಿನಗಳಲ್ಲಿ ಬೀಗ ತೆಗೆಯಲಾಗಿತ್ತು) ಈ ಬಾರಿ ಐದನೆಯ ಪರ್ಯಾಯದ ಧರ್ಮ ಸಂಸತ್ತಿನಲ್ಲಿ ಅಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಣಯರ್ ತೆಗೆದುಕೊಳ್ಳುವ ನಿರೀಕ್ಷೆ ಇದೆ.

ಶನಿವಾರ ಪೇಜಾವರ ಮಠದ ರಾಮವಿಠಲ ಸಭಾಭವನದಲ್ಲಿ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ಮಾತನಾಡಿದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು, ವಿಶ್ವಹಿಂದು ಪರಿಷತ್ತಿ ನಿಂದಾಗಿ ಜಾತಿ ಮತ ಮೀರಿ ನಾವೆಲ್ಲಾ ಹಿಂದುಗಳು ಎಂಬ ಭಾವನೆ ವ್ಯಕ್ತ ವಾಗಿದೆ. ಆದರೆ ಈಗ ಸಣ್ಣಪುಟ್ಟ ಉತ್ತಮ ಅಥವಾ ಕೆಟ್ಟ ಘಟನೆಗಳು ನಡೆದರೂ ಅದನ್ನು ಜಾತಿ ಆಧಾರದಲ್ಲಿ ನೋಡುವ ಜಾತೀವಾದ ದೃಷ್ಟಿಕೋನ ಬೆಳೆದಿದೆ. ಇದರ ಬದಲು ಸಮಗ್ರ ಸಮಾಜದ ಒಂದು ಭಾಗವಾಗಿ ಕಾಣುವಂತಾಗಬೇಕು. ಸಣ್ಣಪುಟ್ಟ ಸಂಗತಿಗಳನ್ನು ದೂರವಿಟ್ಟು ಏಕತೆ, ಸಂಘಟೆಗೆ ಒತ್ತು ನೀಡಬೇಕಾಗಿದೆ ಎಂದರು.

ವಿಹಿಂಪದಿಂದ ಜಾತಿ ಮತ್ತು ಅಸ್ಪಶ್ಯತೆ ಭಾವನೆ ಮೀರಿ ನಿಲ್ಲಲು ಸಾಧ್ಯ ವಾಗಿದೆ. ಸಾವಿರಾರು ಸಂತರು ಪಾಲ್ಗೊಳ್ಳುವ ಧರ್ಮಸಂಸತ್ ಅಧಿವೇಶನದಲ್ಲಿ ರಾಮಮಂದಿರ ನಿರ್ಮಾಣ ಕುರಿತು ಚರ್ಚೆ ನಡೆಸಲಾಗುವುದು. ಡಿಸೆಂಬರ್ ಕೊನೆಯೊಳಗೆ ನ್ಯಾಯಾಲಯದ ತೀರ್ಪೂ ಹೊರಬೀಳುವ ಲಕ್ಷಣಗಳಿವೆ. ಸಮ್ಮೇಳನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಕರ್ನಾಟಕ ರಾಜ್ಯಕ್ಕೆ, ವಿಶೇಷವಾಗಿ ಉಡುಪಿ, ದ.ಕ. ಜಿಲ್ಲೆಯವರಿಗೆ ಇದೆ ಎಂದು ಪರ್ಯಾಯಶ್ರೀಪೇಜಾವರ ಶ್ರೀಗಳು ನುಡಿದರು.

ಭಾಗವತ್ ಭಾಗಿ: ಆರೆಸ್ಸೆಸ್ ಸರಸಂಘ ಚಾಲಕ್ ಮೋಹನ್ ಭಾಗವತ್ ಮೊದಲ ದಿನ ಪಾಲ್ಗೊಳ್ಳುವರು. ಕೊನೆಯ ದಿನ ಸಂಜೆ ಆಕರ್ಷಕ ಶೋಭಾಯಾತ್ರೆ, ಬಳಿಕ ಒಂದು ಲಕ್ಷ ಜನರು ಸೇರುವ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಮಂಗಳೂರು ವಿಭಾಗಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿ ಪದಾಧಿಕಾರಿಗಳ ಪಟ್ಟಿ ವಾಚಿಸಿದರು.

ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಧರ್ಮಸಂಸತ್‌ನ ಲಾಂಛನವನ್ನು ಬಿಡುಗಡೆಗೊಳಿಸಿದರು. ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಾಂತ ಕಾರ್ಯದರ್ಶಿ ಕೃಷ್ಣಮೂರ್ತಿ ಕಾರ್ಯಕ್ರಮನಿರ್ವಹಿಸಿ ಟಿ.ಎ.ಪಿ.ಶೆಣೈ ವಂದಿಸಿದರು.

ಅಧಿವೇಶನಕ್ಕೆ ಸುಮಾರು ಐದು ಕೋಟಿ ರೂ.ಗಳ ಅಂದಾಜು ವೆಚ್ಚವನ್ನು ಲೆಕ್ಕಹಾಕಲಾಗಿದೆ ಎಂದು ಸ್ವಾಗತ ಸಮಿತಿ ಕೋಶಾಧ್ಯಕ್ಷ ಪಿ.ವಿಲಾಸ ನಾಯಕ್ ತಿಳಿಸಿದರು. ಸ್ಮರಣ ಸಂಚಿಕೆ ಪ್ರಧಾನ ಸಂಪಾದಕಿ ಡಾ.ಸಂಧ್ಯಾ ಎಸ್. ಪೈ, ವಿವಿಧ ಸಮಿತಿ ಪದಾಧಿಕಾರಿಗಳಾದ ಮೂಡಬಿದಿರೆಯ ಡಾ.ಮೋಹನ ಆಳ್ವ, ಗೋಪಾಲ್ ಹೊಸೂರು,ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪತ್ರಿಕೋದ್ಯಮಿ ವಿಜಯ ಸಂಕೇಶ್ವರ, ಡಾ.ರಾಮನ ಗೌಡರ್, ಮನೋಹರ ಶೆಟ್ಟಿ, ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷೆ ಡಾ.ವಿಜಯಲಕ್ಷ್ಮೀ ದೇಶಮಾನೆ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕದ ಎಲ್ಲಾ ಜಿಲ್ಲೆಗಳ ಪ್ರವುುಖರು ಸಬೆಯಲ್ಲಿ ಪಾಲ್ಗೊಂಡಿದ್ದರು.

 ರಾಜಕೀಯ ಬಣ್ಣದ ಅಪಾಯ ರಾಜಕೀಯ ಬಣ್ಣದ ಅಪಾಯ ಮುಂದಿನ ದಿನಗಳಲ್ಲಿ ಚುನಾವಣೆ ಬರುತ್ತಿದೆ. ಧರ್ಮಸಂಸತ್ ಚಟುವಟಿಕೆ ಗಳಿಗೆ ರಾಜಕೀಯ ಬಣ್ಣ ಬರುವ ಅಪಾಯವಿದೆ. ಆದ್ದರಿಂದ ಅಧಿವೇಶನ ವನ್ನು ರಾಜಕೀಯೇತರವಾಗಿ ನಡೆಯುವಂತೆ, ಹಿಂದು ಸಮಾಜದ ಏಕತೆಗಾಗಿ ದುಡಿಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಡಾ. ಡಿ.ವೀರೇಂದ್ರ ಹೆಗ್ಗಡೆ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News