ಸಿಐಟಿಯು ಜಾಗೃತಿ ಜಾಥಾಕ್ಕೆ ಮಂಗಳೂರಿನಲ್ಲಿ ಸ್ವಾಗತ

Update: 2017-08-12 15:56 GMT

ಮಂಗಳೂರು, ಆ. 12: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಕಳೆದ ಜುಲೈ 29ರಿಂದ ರಾಜ್ಯಾದ್ಯಂತ ಸಂಚರಿಸಿರುವ ಜಾಗೃತಿ ಜಾಥಾ ಶನಿವಾರ ನಗರಕ್ಕೆ ಆಗಮಿಸಿತು.

ದ.ಕ. ಜಿಲ್ಲೆಯ ಸಿಐಟಿಯು ಸಂಯೋಜಿತ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಜಾಥಾಕ್ಕೆ ಅದ್ದೂರಿ ಸ್ವಾಗತ ಕೋರಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ಸಭೆ ಏರ್ಪಡಿಸಲಾಯಿತು.

 ರಾಜ್ಯವ್ಯಾಪಿ ಕಾರ್ಮಿಕರಿಗೆ ಕನಿಷ್ಠ 18,000 ರೂ. ಸಮಾನ ವೇತನ ನೀಡಬೇಕು, ಅಸಂಘಟಿತ ಕಾರ್ಮಿಕರಿಗೆ ವಸತಿ, ಭವಿಷ್ಯನಿಧಿ ಮತ್ತು ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿಗೊಳಿಸಬೇಕು, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಕೂಡದು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಕಾರ್ಮಿಕರ ಹಕ್ಕುಗಳ ರಕ್ಷಣೆ ಮಾಡಬೇಕು, ಕೋರ್ಪರೇಟ್ ಬಂಡವಾಳದ ಪರ ಮಾಡಲಾಗುತ್ತಿರುವ ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ಹಿಂದೆಗೆಯಬೇಕು, ಸ್ಕೀಮ್ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ಕನಿಷ್ಠ ವೇತನ ನೀಡಬೇಕು, ಎಲ್ಲಾ ಜಿಲ್ಲೆಗಳಲ್ಲಿಯೂ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಡಲಾಯಿತು.

 ಸಿಐಟಿಯು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಇಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಜನರಿಗೆ ಸಂಪೂರ್ಣ ನೆಮ್ಮದಿ ಇದೆ ಎಂಬುದಾಗಿ ಪ್ರಚಾರ ಮಾಡುತ್ತಿದೆ. ಆದರೆ ನಿಜವಾಗಿ ಜನರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಪ್ರಧಾನಿ ಮೋದಿಯವರು ಹಲವಾರು ದೇಶಗಳಿಗೆ ಸುತ್ತಾಡಿದರೂ, ಅವರು ಮಾಡಿರುವುದು ವಿದೇಶದ ಖಾಸಗಿ ಉದ್ಯಮಿಗಳಿಗೆ ನಮ್ಮ ದೇಶದ ಉದ್ಯಮಗಳನ್ನು ಅಗ್ಗದ ಬೆಲೆಗೆ ನೀಡಿರುವುದಾಗಿದೆ. ತಾವು ದೇಶಭಕ್ತರು ಎಂದು ಬಿಂಬಿಸುತ್ತಿರುವ ಕೇಂದ್ರ ಸರಕಾರ, ರಕ್ಷಣಾ ಉದ್ಯಮದ ಸುಮಾರು ರೂ. 1 ಲಕ್ಷ ಕೋಟಿಗಿಂತಲೂ ಅಧಿಕ ಮೌಲ್ಯದ ಬಿಇಎಂಎಲ್ ಸಂಸ್ಥೆಯನ್ನು ಜುಜುಬಿ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದೆ. ವಿದೇಶಗಳಿಂದ ಅಗ್ಗದ ಬೆಲೆಗೆ ಖರೀದಿಸಿದ ಕಚ್ಚಾ ತೈಲವನ್ನು ಪರಿಷ್ಕರಿಸಿ ದೇಶದ ಅಂಬಾನಿ, ಅದಾನಿ ಮೊದಲಾದ ಮಧ್ಯವರ್ತಿ ಉದ್ಯಮಿಗಳಿಗೆ ಹೇರಳ ಲಾಭ ಮಾಡಿಕೊಡಲಾಗುತ್ತಿದೆ. ನೋಟು ಅಮಾನ್ಯೀಕರಣದ ಬಳಿಕದ ಏಳು ತಿಂಗಳುಗಳಲ್ಲಿ ಜನಸಾಮಾನ್ಯರಿಗೆ ಒಂದೆಡೆ ತೊಂದರೆಯಾದರೆ ಮತ್ತೊಂದೆಡೆ ದೇಶದ ಕೆಲವೇ ಉದ್ಯಮಿಗಳ ಸಂಪತ್ತು ರೂ. 3.5 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ ಎಂದು ಆರೋಪಿಸಿದರು.

 ದೇಶದ ಸಂಪತ್ತನ್ನು ಸೃಷ್ಟಿಸಿದವರು ಈ ದೇಶದ ದುಡಿಯುವ ವರ್ಗ. ಅವರ ದುಡಿಮೆಯ ಲಾಭವನ್ನು ಕಾರ್ಪೊರೇಟ್ ಉದ್ಯಮಿಗಳು ಪಡೆಯುತ್ತಿದ್ದಾರೆ. ಬೀಡಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಎಂಜಿನಿಯರಿಂಗ್ ಪದವೀಧರರೂ 10,000 ರೂ. ವೇತನಕ್ಕೆ ಕೆಲಸ ಮಾಡುವ ಪರಿಸ್ಥಿತಿ ಇದೆ. ಪೌರಕಾರ್ಮಿಕರು ಹೋರಾಟ ನಡೆಸಿದುದರಿಂದ ಅವರ ಕನಿಷ್ಟ ವೇತನ ರಾಜ್ಯದಲ್ಲಿ ರೂ. 14,000 ಆಗಿದೆ. ಕಾರ್ಮಿಕರ ಶ್ರಮದ ಪ್ರಯೋಜನ ಬಂಡವಾಳಿಗರು ಪಡೆಯುತಿತಿರುವಾಗಲೇ, ದುಡಿಯುವ ಜನರನ್ನು ಧರ್ಮದ ಹೆಸರಲ್ಲಿ ವಿಭಜಿಸುವ ಚಟುವಟಿಕೆಗಳು ಹೆಚ್ಚುತ್ತಿವೆ. ಇದನ್ನು ದುಡಿಯುವ ವರ್ಗ ಒಗ್ಗಟ್ಟಾಗಿ ಎದುರಿಸಬೇಕಾಗಿದೆ ಎಂದು ಮೀನಾಕ್ಷಿಸುಂದರಂ ಹೇಳಿದರು.

ಸಿಐಟಿಯು ರಾಜ್ಯ ಮುಖಂಡ ಕೆ. ಎನ್. ಉಮೇಶ್ ಮಾತನಾಡಿದರು.

ಸಿಐಟಿಯು ದ.ಕ ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಿಐಟಿಯು ರಾಜ್ಯಾಧ್ಯಕ್ಷ ಎಸ್. ವರಲಕ್ಷ್ಮೀ, ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ರಾಜ್ಯ ಸಾರಿಗೆ ಕಾರ್ಮಿಕ ಮುಖಂಡ ರಾಘವೇಂದ್ರ, ಸಂತೋಷ್ ಬಳ್ಳಾರಿ, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಿಲ್ಲಾ ಮುಖಂಡರಾದ ಯು. ಬಿ. ಲೋಕಯ್ಯ, ಜಯಂತಿ ಬಿ. ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಡಿವೈಎಫ್‌ಐ ರಾಜ್ಯ ಸಮಿತಿಯ ಬಸವರಾಜ್ ಪೂಜಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಜಾಥಾದ ಕಲಾವಿದರ ತಂಡವು ಸಫ್ದರ್ ಹಷ್ಮಿಯವರ ‘ಹಲ್ಲಾ ಬೋಲ್’ ನಾಟಕ ಆಧಾರಿತ ‘ನಿದ್ದೆಯು ನಮಗಿಲ್ಲ ಎದ್ದೇಳಿ’ ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿತು. ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News