ಡೋಕಾ ಲ ವಿವಾದಲ್ಲಿ ಭಾರತದ ವರ್ತನೆ ಪ್ರಬುದ್ಧ: ಅಮೆರಿಕ ಪರಿಣತ

Update: 2017-08-12 16:06 GMT

ವಾಶಿಂಗ್ಟನ್, ಆ. 12: ಭಾರತ-ಚೀನಾ ಗಡಿಯ ಡೋಕಾ ಲ ವಲಯದಲ್ಲಿ ಉಭಯ ಸೇನೆಗಳ ನಡುವೆ ಉಂಟಾಗಿರುವ ಬಿಕ್ಕಟ್ಟಿನಲ್ಲಿ ಭಾರತ ‘ಪ್ರಬುದ್ಧ ಶಕ್ತಿಯಂತೆ’ ವರ್ತಿಸುತ್ತಿದೆ, ಆದರೆ ಚೀನಾದ ವರ್ತನೆ ಇತರರ ಗಮನ ಸೆಳೆಯಲು ಕಸರತ್ತು ನಡೆಸುವ ತರುಣರಂತೆ ಇದೆ ಎಂದು ಅಮೆರಿಕದ ರಕ್ಷಣಾ ಪರಿಣತರೊಬ್ಬರು ಹೇಳಿದ್ದಾರೆ.

ಡೋಕಾ ಲದಲ್ಲಿ ರಸ್ತೆ ನಿರ್ಮಿಸುವ ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿಯ ಯೋಜನೆಯನ್ನು ಭಾರತೀಯ ಸೇನೆ ವಿಫಲಗೊಳಿಸಿದ ಬಳಿಕ ಉಭಯ ಸೇನೆಗಳ ನಡುವೆ ಉದ್ವಿಗ್ನತೆ ನೆಲೆಸಿದೆ.

ಈ ವಿಷಯದಲ್ಲಿ ಭಾರತದ ವರ್ತನೆಯನ್ನು ಶ್ಲಾಘಿಸಿರುವ ಪ್ರತಿಷ್ಠಿತ ಅಮೆರಿಕ ನೌಕಾ ಯುದ್ಧ ಕಾಲೇಜ್‌ನ ತಂತ್ರಗಾರಿಕೆ ಪ್ರೊಫೆಸರ್ ಜೇಮ್ಸ್ ಆರ್. ಹೋಮ್ಸ್, ‘‘ಹೊಸದಿಲ್ಲಿಯು ಈವರೆಗೆ ಸರಿಯಾದ ಕೆಲಸವನ್ನೇ ಮಾಡಿದೆ. ಅದು ವಿವಾದ ಸ್ಥಳದಿಂದ ಹಿಂದೆಯೂ ಸರಿಯಲಿಲ್ಲ ಹಾಗೂ ಬೀಜಿಂಗ್‌ನ ಆವೇಶಭರಿತ ಮಾತುಗಳಿಗೆ ಅದೇ ರೀತಿಯಲ್ಲಿ ಉತ್ತರಿಸಲೂ ಇಲ್ಲ’’ ಎಂದು ಹೇಳಿದ್ದಾರೆ.

ತನ್ನ ಅತ್ಯಂತ ಶಕ್ತ ನೆರೆಯ ದೇಶದೊಂದಿಗೆ ಗಡಿ ವಿವಾದವೊಂದನ್ನು ಜೀವಂತವಾಗಿ ಇಡಲು ಚೀನಾ ಬಯಸುತ್ತಿರುವುದು ವಿಚಿತ್ರವಾಗಿದೆ ಎಂದು ಹೋಮ್ಸ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News