ಮರವಂತೆ ಬಳಿ ಅಲೆಗಳಿಂದ ವಿದ್ಯುತ್‌ಗೆ ಡಿಪಿಆರ್ ಸಿದ್ಧ

Update: 2017-08-12 16:32 GMT

ಉಡುಪಿ, ಆ.12: ಸಮುದ್ರದ ಅಲೆಗಳಿಂದ ವಿದ್ಯುತ್ ತಯಾರಿಸುವ ಬಗ್ಗೆ ಪ್ರಾಥಮಿಕ ಪ್ರಯೋಗಗಳಲ್ಲಿ ಯಶಸ್ಸು ಸಾಧಿಸಿರುವ ಸ್ಥಳೀಯ ವಿಜ್ಞಾನಿ ಪೆರಂಪಳ್ಳಿಯ ಸುಸಿ ಗ್ಲೋಬಲ್ ಸಂಶೋಧನಾ ಸಂಸ್ಥೆಯ ವಿಜಯಕುಮಾರ್ ಹೆಗ್ಡೆ ಅವರು ಜಿಲ್ಲೆಯ ಮರವಂತೆಯಲ್ಲಿ 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ‘ಸಮಗ್ರ ಯೋಜನಾ ವರದಿ’(ಡಿಪಿಆರ್) ಸಿದ್ಧಪಡಿಸಿರುವುದಾಗಿ ಹೇಳಿದ್ದಾರೆ.

ಯೋಜನಾ ವರದಿಯನ್ನು ತಾವು ಈಗಾಗಲೇ ರಾಜ್ಯ ಸರಕಾರಕ್ಕೆ ಸಲ್ಲಿಸಿರುವು ದಾಗಿ ಹೆಗ್ಡೆ ತಿಳಿಸಿದರು. ಬೆಂಗಳೂರಿನ ಎನರ್ಜಿ ಆ್ಯಂಡ್ ಡೆವಲಪ್‌ಮೆಂಟ್ ಸೆಂಟರ್‌ನ ಎಂಜಿನಿಯರ್ ಧೀರೇಂದ್ರ ಆಚಾರ್ಯ ಹಾಗೂ ಸುಸಿ ಗ್ಲೋಬಲ್ ರಿಸರ್ಚ್‌ನ ವಿಜಯಕುಮಾರ್ ಹೆಗ್ಡೆ ಅವರು ಸಂಸ್ಥೆಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಮರವಂತೆಯಲ್ಲಿ ಸಮುದ್ರದ ಅಲೆಗಳ ಶಕ್ತಿ ಉತ್ತಮವಾಗಿದೆ. ಇದಕ್ಕಾಗಿಯೇ ಆ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಅಲೆಯ ಉಬ್ಬರವಿಳಿತದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಕಳೆದ ವರ್ಷ ಕೆಮ್ಮಣ್ಣು ಸಮುದ್ರ ತೀರದಲ್ಲಿ ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾಗಿದ್ದೇನೆ. ಮರವಂತೆಯಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಹಂತದಲ್ಲಿ 10 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಿ ಮೆಸ್ಕಾಂ ಗ್ರಿಡ್‌ಗಳಿಗೆ ವಿದ್ಯುತ್ ಅನ್ನು ಸರಬರಾಜು ಮಾಡಲು ಸರಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೆಗ್ಡೆ ವಿವರಿಸಿದರು.

 ಪೈಲಟ್ ಯೋಜನೆಯಾಗಿ ಇದನ್ನು ಸರಕಾರ ಸ್ವೀಕರಿಸುವ ನಿರೀಕ್ಷೆ ಇದ್ದು, ಸರಕಾರದ ಸಹಕಾರ ಉತ್ತಮ ರೀತಿಯಲ್ಲಿ ದೊರೆತಲ್ಲಿ ಮುಂದಕ್ಕೆ 500 ಮೆ.ವ್ಯಾ. ವಿದ್ಯುತ್ ಉತ್ಪಾದನೆಯ ಗುರಿಯೂ ಇದೆ. ತನ್ನ ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಕಡಲ್ಕೊರೆತವೂ ನಿಯಂತ್ರಣಕ್ಕೆ ಬರಲಿದೆ ಎಂದವರು ಹೇಳಿದರು.

ಹೆಗ್ಡೆಯವರ ಅಲೆಗಳಿಂದ ವಿದ್ಯುತ್‌ನ ಯೋಜನೆಯನ್ನು ವೀಕ್ಷಿಸಿದ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಮಿತವ್ಯಯ ಇಂಧನ, ಪರಿಸರಸ್ನೇಹಿ ಯೋಜನೆ ಈಗಿನ ವಾತಾವರಣಕ್ಕೆ ಅತ್ಯಗತ್ಯವಾಗಿದೆ. ಭೂಮಿಯಲ್ಲಿ ಅಧಿಕಾಂಶ ಭಾಗ ಸಮುದ್ರವಿರುವುದರಿಂದ ಅಲೆಗಳ ಶಕ್ತಿಯಿಂದ ಇಂಧನ ಉತ್ಪಾದಿಸುವ ಯೋಜನೆಗೆ ಉತ್ತಮ ಭವಿಷ್ಯವಿದೆ ಎಂದರು.

ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಪಿ. ಭಟ್, ಕೆನರಾ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಟಿ. ನಾರಾಯಣ ಶಾನುಭಾಗ್ ಉಪಸ್ಥಿತರಿದ್ದರು.

6ಕೋಟಿ ರೂ.ಗೆ ಒಂದು ಮೆ.ವ್ಯಾ ವಿದ್ಯುತ್!

ಸಮುದ್ರದ ಅಲೆಗಳ ಶಕ್ತಿಯಿಂದ ಉತ್ಪಾದನೆಗೊಳ್ಳುವ ಒಂದು ಮೆ.ವ್ಯಾ. ವಿದ್ಯುತ್ ಘಟಕಕ್ಕೆ 6 ಕೋ.ರೂ. ವೆಚ್ಚವಾಗುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಿಲ್ಲ. ಆದರೆ ಕಲ್ಲಿದ್ದಲು ಮತ್ತಿತರ ಮೂಲಗಳಿಂದ ಉತ್ಪಾದಿಸುವ ಒಂದು ಮೆ.ವ್ಯಾ. ವಿದ್ಯುತ್‌ಗೆ 25ರಿಂದ 30 ಕೋಟಿ ರೂ.ಗಳ ಅಗತ್ಯವಿದೆ. ಸರಕಾರ ಕೈಜೋಡಿಸಿದರೆ ವರ್ಷಕ್ಕೆ ಕೋಟ್ಯಾಂತರ ರೂ.ಗಳ ಉಳಿಕೆ ಮಾಡಲು ಸಾಧ್ಯವಿದೆ. ಈ ಕ್ಷೇತ್ರಗಳಲ್ಲಿ ತಾನು ಕಳೆದ 37 ವರ್ಷಗಳಿಂದ ನಿರಂತರವಾಗಿ ಸಂಶೋಧನೆ ಮಾಡುತಿದ್ದು, ಯಶಸ್ಸು ಕಾಣುವ ಪೂರ್ಣ ಭರವಸೆ ಇದೆ ಎಂದು ವಿಜಯಕುಮಾರ್ ಹೆಗ್ಡೆ ಹೇಳಿದರು. ಗಂಟೆಗೆ 120 ಕಿ.ಮೀ. ಓಡುವ ಡೀಸೆಲ್ ಬೈಕ್ ಕೂಡ ಸಂಶೋಧನೆಯಲ್ಲಿದೆ ಎಂದರು.

ಅಲೆಗಳಿಂದ ವಿದ್ಯುತ್ ಸಾಧ್ಯ

ಕರಾವಳಿ ಪ್ರದೇಶದಲ್ಲಿ ಸೌರಶಕ್ತಿ, ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಪೂರಕ ವಾತಾವರಣವಿಲ್ಲ. ಆದರೆ ಸಮುದ್ರದ ಅಲೆಯಿಂದ ವಿದ್ಯುತ್ ಉತ್ಪಾದನೆಗೆ ಒತ್ತು ಕೊಟ್ಟರೆ ಕರಾವಳಿಯ ಯಾವುದೇ ಮೂಲೆಗೆ ವಿದ್ಯುತ್ ಕೊಡಲು ಸಾಧ್ಯವಾಗುತ್ತದೆ. ಇಲ್ಲೇ ಉತ್ಪಾದನೆ ಮಾಡಿ ಗ್ರಿಡ್‌ಗಳಿಗೆ ನೇರವಾಗಿ ಕೊಡುವುದರಿಂದ ಸರಬರಾಜು ವೆಚ್ಚ ಉಳಿಯುತ್ತದೆ ಎಂದು ಬೆಂಗಳೂರಿನ ಎನರ್ಜಿ ಮತ್ತು ಪವರ್ ಡೆವಲೆಪ್‌ಮೆಂಟ್ ಸೆಂಟರ್‌ನ ಇಂಜಿನಿಯರ್ ಧೀರೇಂದ್ರ ಆಚಾರ್ಯ ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News