ಆ.20ಕ್ಕೆ ಉಡುಪಿಯಲ್ಲಿ ಪಿ.ಸಾಯಿನಾಥ್ ಉಪನ್ಯಾಸ

Update: 2017-08-12 16:48 GMT

ಉಡುಪಿ, ಆ.12: ಹಿರಿಯ ಪತ್ರಕರ್ತ, ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಪಾಲಗುಮ್ಮಿ ಸಾಯಿನಾಥ್ ಅವರು ಆ.20ರ ರವಿವಾರ ಉಡುಪಿಯಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಆಶ್ರಯದಲ್ಲಿ ತಲ್ಲೂರು ನುಡಿಮಾಲೆ-2017ರಲ್ಲಿ ದತ್ತಿನಿಧಿ ಉಪನ್ಯಾಸ ನೀಡಲಿದ್ದಾರೆ ಎಂದು ಟ್ರಸ್ಟ್‌ನ ಟ್ರಸ್ಟಿಗಳಲ್ಲೊಬ್ಬರಾದ, ಪತ್ರಕರ್ತ ರಾಜಾರಾಮ ತಲ್ಲೂರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಲ್ಲೂರು ನುಡಿಮಾಲೆಯ ಮೊದಲ ದತ್ತಿನಿಧಿ ಉಪನ್ಯಾಸ ಇದಾಗಿದ್ದು, ‘ಕರಾವಳಿ ಕಟ್ಟು’ ಸರಣಿಯಲ್ಲಿ ಈ ಉಪನ್ಯಾಸ ಮಾಲಿಕೆಯಲ್ಲಿ ಸಾಯಿನಾಥ್ ಅವರು ‘ಡಿಜಿಟಲ್ ಯುಗದಲ್ಲಿ ಗ್ರಾಮೀಣ ಭಾರತ ಕಥನ’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದರು.

ಗ್ರಾಮೀಣ ಭಾರತದಲ್ಲಿ ಕೃಷಿಕರ ಸಂಕಷ್ಟಗಳನ್ನು ಮುಖ್ಯವಾಹಿನಿ ಮಾಧ್ಯಮಗಳು ಕಡೆಗಣಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಹೊಸ ತಲೆಮಾರಿನ ಯುವಜನತೆಗೆ ತಮ್ಮ ದೇಶದ ಸಂಕಷ್ಟಗಳ ಅರಿವು ಮೂಡುತ್ತಿಲ್ಲ. ಈ ನಿಟ್ಟಿನಲ್ಲಿ ಡಿಜಿಟಲ್ ಜಗತ್ತಿನಲ್ಲಿ ಗ್ರಾಮೀಣ ಭಾರತವನ್ನು ಬಿಂಬಿಸುವ ಸಾಧ್ಯತೆಗಳ ಕುರಿತು ಇಲ್ಲಿ ಚಿಂತನೆ ನಡೆಯಲಿದೆ ಎಂದರು.

ಸಾಯಿನಾಥ್ ಅವರ ಉಪನ್ಯಾಸ ಕಾರ್ಯಕ್ರಮ ಆ.20ರಂದು ಬೆಳಗ್ಗೆ 10:00ರಿಂದ ಅಪರಾಹ್ನ 2:00ಗಂಟೆಯವರೆಗೆ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ನಡೆಯಲಿದೆ. ಉಪನ್ಯಾಸದ ಬಳಿಕ ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್ ಅವರು ಸಾಯಿನಾಥ್ ಜೊತೆ ಸಂವಾದನ ನಡೆಸಿಕೊಡು ವರು. ಹಿರಿಯ ಪತ್ರಕರ್ತರಾದ ನಾಗೇಶ್ ಹೆಗಡೆ, ಅರ್ಥಶಾಸ್ತ್ರಜ್ಞ ಹಾಗೂ ಕಥೆಗಾರ ಪ್ರೊ.ಎಂ.ಎಸ್.ಶ್ರೀರಾಮ್ ಹಾಗೂ ಬೆಂಗಳೂರಿನ ಅಜೀಮ್ ಪ್ರೇಮ್‌ಜಿ ವಿವಿಯ ಉಪನ್ಯಾಸಕ ಡಾ.ನಾರಾಯಣ ಎ. ಸಂವಾದ ನಡೆಸಲಿದ್ದಾರೆ ಎಂದು ಸಂಘಟಕರಲ್ಲೊಬ್ಬರಾದ ಉಡುಪಿ ಮನೋತಜ್ಞ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

ಭಾರತದಲ್ಲಿ ಅಭ್ಯುದಯ ಪತ್ರಿಕೋದ್ಯಮದ ಹಾದಿ ತುಳಿದಿರುವ ವಿರಳ ಪತ್ರಕರ್ತರಲ್ಲಿ ಸಾಯಿನಾಥ್ ಅಗ್ರಗಣ್ಯರು. ದೇಸದ ಗ್ರಾಮೀಣ ರೈತರ ಸಂಕಟಗಳು, ಸರಣಿ ಆತ್ಮಹತ್ಯೆಗಳ ಹಿನ್ನೆಲೆಗಳನ್ನು ಅಂಕಿ-ಅಂಕಗಳೊಂದಿಗೆ ದೇಶದ ಜನತೆಯ ಮುಂದೆ ಬಿಚ್ಚಿಟ್ಟು, ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸಿದವರು ಸಾಯಿನಾಥ್ ಅವರು ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ರಾಬರ್ಟ್ ಜೋಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News