ಉಡುಪಿ: ಹಾಜಿ ಅಬ್ದುಲ್ಲಾ ಟ್ರಸ್ಟ್ ಉದ್ಘಾಟನೆ

Update: 2017-08-12 16:52 GMT

ಉಡುಪಿ, ಆ.12: ಉಡುಪಿಯ ಕೊಡುಗೈ ದಾನಿ ಎನಿಸಿಕೊಂಡು ಶಿಕ್ಷಣ, ಆರೋಗ್ಯ, ಕೋಮು ಸೌಹಾರ್ದತೆ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅಚ್ಚಳಿಯದ ಸಾಧನೆ ಮಾಡಿದ ಹಾಜಿ ಅಬ್ದುಲ್ಲಾ ಅವರ ಸಂಸ್ಮರಣೆ ಹಾಗೂ ಹಾಜಿ ಅಬ್ದುಲ್ಲಾ ಟ್ರಸ್ಟ್‌ನ ಉದ್ಘಾಟನೆ ಇಂದು ನಗರದ ಲಯನ್ಸ್ ಭವನದಲ್ಲಿ ನಡೆಯಿತು.

ಹಾಜಿ ಅಬ್ದುಲ್ಲಾ ಅವರ ನೆನಪನ್ನು ಸದಾ ಹಸಿರಾಗಿ ಉಳಿಸಿಕೊಳ್ಳುವ ಸಲುವಾಗಿ ಅವರ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಈ ಟ್ರಸ್ಟ್‌ನ್ನು ಪ್ರಾರಂಭಿಸಿದ್ದೇವೆ. ಅವರ ಹೆಸರಿನಲ್ಲಿ ಇನ್ನು ಮುಂದೆ ಪ್ರತಿ ತಿಂಗಳಿಗೊಂದರಂತೆ ಕೋಮುಸೌಹಾರ್ದತೆ, ಆರೋಗ್ಯ ಹಾಗೂ ಶಿಕ್ಷಣದ ಕುರಿತಂತೆ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಮುಂದೆ ಸಾಧ್ಯವಾದರೆ ಹಾಜಿ ಅಬ್ದುಲ್ದಾರ ಹೆಸರಿನಲ್ಲಿ ಸಂಸ್ಥೆಯೊಂದನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಸಿದ್ಧ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ತಿಳಿಸಿದರು.

  ಹಾಜಿ ಅಬ್ದುಲ್ಲಾ ಅವರು ತನ್ನ ಜೀವಿತಾವಧಿಯಲ್ಲಿ ತನ್ನ ಸ್ವಂತದ್ದಾದ 1,500 ಎಕರೆ ಪ್ರದೇಶವನ್ನು ಸಮಾಜದ ವಿವಿಧ ಸದ್ದುದ್ದೇಶಗಳಿಗೆ ದಾನವಾಗಿ ನೀಡಿರುವುದು ದಾಖಲೆಗಳ ಅಧ್ಯಯನದಿಂದ ಗೊತ್ತಾಗಿದೆ. ಅಲ್ಲದೇ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಪರ್ಯಾಯ ಹಾಗೂ ಇತರ ಸಂದರ್ಭಗಳಲ್ಲಿ ನೀಡಿದ ವಿವಿಧ ದಾನ, ಕೊಡುಗೆ ಹಾಗೂ ಸಹಾಯಗಳಿಗೆ ಲೆಕ್ಕವಿಲ್ಲ ಎಂದವರು ವಿವರಿಸಿದರು.

 ಇಷ್ಟಾದರೂ ಇಂದು ಅವರ ಹೆಸರಿನ ಒಂದೊಂದು ಗುರುತುಗಳನ್ನು ಅಳಿಸುವ ಕೆಲಸ ನಡೆಯುತ್ತಿದೆ. ಹಾಜಿ ಅಬ್ದುಲ್ಲಾ ಕಟ್ಟಿದ ಉರ್ದು ಶಾಲೆ ಬಾಗಿಲು ಮುಚ್ಚಿದೆ. ಈಗ ಕವಿ ಮುದ್ದಣ ರಸ್ತೆಯಲ್ಲಿರುವ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿಯವರಿಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸಲು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಜಿ ಅಬ್ದುಲ್ಲಾ ಅವರು ಉಡುಪಿಗೆ ಮಾಡಿದ ಸೇವೆಯ ನೆನಪನ್ನು ಉಳಿಸಿಕೊಳ್ಳುವ ಕಾರಣಕ್ಕಾಗಿ ಟ್ರಸ್ಟ್‌ನ್ನು ಪ್ರಾರಂಭಿಸಲಾಗಿದೆ ಎಂದು ಡಾ.ಭಂಡಾರಿ ವಿವರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ, ಹಾಜಿ ಅಬ್ದುಲ್ಲಾರ ಜೀವನದ ಕುರಿತು ಮೊದಲ ಬಾರಿ ಕೃತಿಯೊಂದನ್ನು ರಚಿಸಿದ ಖ್ಯಾತ ಸಾಹಿತಿ ಹಾಗೂ ವಿಮರ್ಶಕ ಮುರಳೀಧರ ಉಪಾಧ್ಯ ಹಿರಿಯಡಕ ಅವರು ಮಾತನಾಡಿ, ಹಾಜಿ ಅಬ್ದುಲ್ಲಾರ ಸಹೃದಯೀ ಗುಣಗಳ ವಿವಿಧ ಮುಖಗಳನ್ನು ಸಭಿಕರೆದುರು ತೆರೆದಿಟ್ಟರು.

ಬ್ರಿಟಿಷರಿಂದ ಖಾನ್ ಬಿರುದನ್ನು ಪಡೆದಿದ್ದ ಅಗರ್ಭ ಶ್ರೀಮಂತ ಹಾಜಿ ಅಬ್ದುಲ್ಲ, ಗಾಂಧೀಜಿ 1927ರಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಉಡುಪಿ ಜನತೆ ಪರವಾಗಿ ಅವರಿಗೆ ಒಂದು ಲಕ್ಷ ರೂ.ಗಳ ನಿಧಿಯನ್ನು ಅರ್ಪಿಸಿದ್ದರು. ಅದೇ ರೀತಿ 1934ರಲ್ಲಿ ಮೊದಲ ಬಾರಿ ಗಾಂಧೀಜಿ ಉಡುಪಿಗೆ ಬಂದಾಗ ಅವರ ಅಧ್ಯಕ್ಷತೆಯಲ್ಲೇ ಗಾಂಧಿ ಸಬೆಯನ್ನುದ್ದೇಶಿಸಿ ಮಾತನಾಡಿದ್ದರು ಎಂದು ನೆನಪಿಸಿದರು.

ಹಾಜಿ ಅಬ್ದುಲ್ಲಾರ ನಿಕಟವರ್ತಿಯಾಗಿದ್ದ ಅವರು ಸ್ಥಾಪಿಸಿದ್ದ ಕಾರ್ಪೋರೇಷನ್ ಬ್ಯಾಂಕಿನ ಉದ್ಯೋಗಿಯಾಗಿದ್ಜದ ಪದ್ಮನಾಭ ನಾಯಕ್, ಹಾಜಿ ಅಬ್ದುಲ್ಲಾರ ಹಲವು ಮಧುರ ನೆನಪುಗಳನ್ನು ಭಾವಪರವಶರಾಗಿ ಬಣ್ಣಿಸಿದರು.

 ಹಾಜಿ ಅಬ್ದುಲ್ಲಾ ಅವರ ಸಂಬಂಧಿ ಹಾಗೂ ನಿವೃತ್ತ ಎಲ್‌ಐಸಿ ಅಧಿಕಾರಿ ಖುರ್ಷಿದ್ ಅಹ್ಮದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಹಾಜಿ ಅಬ್ದುಲ್ಲಾ ಮತ್ತೊಬ್ಬ ಸಂಬಂಧಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸಿರಾಜ್ ಅಹ್ಮದ್, ಸಿಪಿಎಂನ ಬಾಲಕೃಷ್ಣ ಶೆಟ್ಟಿ, ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಟ್ರಸ್ಟ್‌ನ ವತಿಯಿಂದ ಮುರಳೀಧರ ಉಪಾಧ್ಯಾಯ, ಉಡುಪಿಯ ಹಾಜಿ ಅಬ್ದುಲ್ಲಾ ಹೆರಿಟೇಜ್ ಮ್ಯೂಸಿಯಂನ ಕ್ಯುರೇಟರ್ ಹಾಗೂ ಗೈಡ್ ಕೃಷ್ಣಯ್ಯ, ಪದ್ಮನಾಭ ನಾಯಕ್, ಅವರು ಸ್ಥಾಪಿಸಿದ ಉಡುಪಿ ನಾರ್ತ್ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಪ್ರತಿಭಾ, ಮೈನ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ರಾಜಭಕ್ಷಿ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್‌ನ ಸದಸ್ಯ ಯೋಗೀಶ್ ಶೇಟ್ ವಂದಿಸಿದರೆ, ಅವಿನಾಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News