ಮಹಿಳೆ ಆತ್ಮಹತ್ಯೆ ಪ್ರಕರಣ: ಆರೋಪಿ ಖುಲಾಸೆ

Update: 2017-08-12 17:12 GMT

ಮಂಗಳೂರು, ಆ. 12: ವರದಕ್ಷಿಣೆ ಕಿರುಕುಳದಿಂದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಸಾಕ್ಷಾಧಾರದ ಕೊರತೆ ಹಿನ್ನೆಲೆಯಲ್ಲಿ ಮಂಗಳೂರಿನ 4ನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಮೂಲತಃ ಹಾಸನದ, ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ, ಆತನ ತಂದೆ ಕೃಷ್ಣಯ್ಯ, ತಾಯಿ ವರಲಕ್ಷ್ಮೀ ಖುಲಾಸೆಗೊಂಡ ಆರೋಪಿಗಳು.

 ಮಂಜುನಾಥ ಮತ್ತು ನಯನಾರ ವಿವಾಹವು 2012ರ ಆ.6ರಂದು ನಡೆದಿತ್ತು. ಮದುವೆಯ ಸಂದರ್ಭದಲ್ಲಿ ನಯನಾಳ ತಂದೆ 2.5ಲಕ್ಷ ನಗದು, 250 ಗ್ರಾಂ ಚಿನ್ನಾಭರಣ ವರದಕ್ಷಿಣೆಯಾಗಿ ಕೊಟ್ಟಿದ್ದರು. ಆದರೆ ಮದುವೆಯಾದ ಬಳಿಕ ನಯನಾಳ ಗಂಡ ಮಂಜುನಾಥ, ಆತನ ತಂದೆ ಕೃಷ್ಣಯ್ಯ, ತಾಯಿ ವರಲಕ್ಷ್ಮೀ ವರದಕ್ಷಿಣೆ ಕಡಿಮೆಯಾಗಿದೆ, ಬೇರೆ ಹುಡುಗಿಯನ್ನು ಮದುವೆಯಾಗುತ್ತಿದ್ದರೆ ಹೆಚ್ಚು ವರದಕ್ಷಿಣೆ ಸಿಗುತಿತ್ತು ಎಂದು ಪೀಡಿಸುತ್ತಿದ್ದರು. ಅಲ್ಲದೆ ಈ ಬಗ್ಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು. ಇದರಿಂದ ತೀವ್ರವಾಗಿ ನೊಂದಿಕೊಂಡ ನಯನಾ 2014ರ ಮೇ 23ರಂದು ಗಂಡ ವಾಸವಾಗಿದ್ದ ಸುರತ್ಕಲ್ ಮುಂಚೂರು ಶ್ರೀನಿವಾಸ ನಗರದ ಬಾಡಿಗೆ ಮನೆಯಲ್ಲಿ ಕೋಣೆಯ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಭವಾನಿ ಹೇರಳೆ, ಆರೋಪಿ ಪರ ಮತ್ತು ವಿರುದ್ಧ ವಾದ ಆಲಿಸಿ, ಆರೋಪಿಗಳ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾಗಿದೆಯೆಂದು ತೀರ್ಮಾನಿಸಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.

ಆರೋಪಿಗಳ ಪರವಾಗಿ ನ್ಯಾಯವಾದಿ ಎಸ್.ಪಿ. ಚಂಗಪ್ಪ, ರೆಹಾನಾ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News