ಭದ್ರತೆಗೆ ಬೆದರಿಕೆಯೊಡ್ಡುತ್ತಿರುವ ಅಕ್ರಮ ವಲಸಿಗರ ಗಡೀಪಾರಿಗೆ ಕೇಂದ್ರದ ನಿರ್ದೇಶ

Update: 2017-08-13 14:05 GMT

ಹೊಸದಿಲ್ಲಿ,ಆ.13: ರೋಹಿಂಗ್ಯಾಗಳಂತಹ ಅಕ್ರಮ ವಲಸಿಗರನ್ನು ಭಯೋತ್ಪಾದಕ ಗುಂಪುಗಳು ಭರ್ತಿ ಮಾಡಿಕೊಳ್ಳಬಹುದು. ಹೀಗಾಗಿ ಅವರು ದೇಶದ ಭದ್ರತೆಗೆ ಬೆದರಿಕೆಯಾಗಿದ್ದಾರೆ ಎಂದು ಹೇಳಿರುವ ಕೇಂದ್ರವು, ಅಂತಹವರನ್ನು ಗುರುತಿಸಿ ಗಡೀಪಾರು ಮಾಡುವಂತೆ ರಾಜ್ಯಗಳಿಗೆ ನಿರ್ದೇಶ ನೀಡಿದೆ.

ಈ ಅಕ್ರಮ ವಲಸಿಗರು ಭಾರತೀಯ ಪ್ರಜೆಗಳ ಹಕ್ಕುಗಳನ್ನು ಅತಿಕ್ರಮಿಸುವುದು ಮಾತ್ರವಲ್ಲ, ಗಂಭೀರ ಭದ್ರತಾ ಸವಾಲುಗಳಿಗೂ ಕಾರಣರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು ಕಳೆದ ವಾರ ಎಲ್ಲ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ಮ್ಯಾನ್ಮಾರ್‌ನ ರಾಖಿನೆ ರಾಜ್ಯದಿಂದ ರೋಹಿಂಗ್ಯಾಗಳು ಭಾರತದೊಳಕ್ಕೆ ನುಸುಳುತ್ತಿರುವುದು ದೇಶದ ಸೀಮಿತ ಸಂಪನ್ಮೂಲಗಳ ಮೇಲೆ ಹೊರೆಯಾಗುತ್ತಿರುವ ಜೊತೆಗೆ ಭಾರತಕ್ಕೆ ಎದುರಾಗಿರುವ ಭದ್ರತಾ ಸವಾಲು ಗಳನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಗೃಹ ಸಚಿವಾಲಯವು ಹೇಳಿದೆ.

ಲಭ್ಯ ದತ್ತಾಂಶಗಳಂತೆ ಯುಎನ್‌ಎಚ್‌ಸಿಆರ್‌ನಲ್ಲಿ ನೋಂದಾವಣೆಗೊಂಡಿರುವ 14,000ಕ್ಕೂ ಅಧಿಕ ರೋಹಿಂಗ್ಯಾಗಳು ಸದ್ಯ ಭಾರತದಲ್ಲಿ ವಾಸವಾಗಿದ್ದಾರೆ ಎಂದು ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರು ಆ.9ರಂದು ಸಂಸತ್ತಿನಲ್ಲಿ ತಿಳಿಸಿದ್ದರು.

ಆದರೆ ದೇಶದಲ್ಲಿ ಸುಮಾರು 40,000 ಅಕ್ರಮ ರೋಹಿಂಗ್ಯಾ ವಲಸಿಗರು ಇದ್ದಾರೆ ಎನ್ನುವುದನ್ನು ಕೆಲವು ಮಾಹಿತಿಗಳು ಸೂಚಿಸಿವೆ ಮತ್ತು ರೋಹಿಂಗ್ಯಾಗಳು ಹೆಚ್ಚಾಗಿ ಜಮ್ಮು, ಹೈದರಾಬಾದ್, ಹರ್ಯಾಣ, ಉತ್ತರ ಪ್ರದೇಶ, ದಿಲ್ಲಿ ಎನ್‌ಸಿಆರ್ ಮತ್ತು ರಾಜಸ್ಥಾನ ಗಳಲ್ಲಿ ನೆಲೆಸಿದ್ದಾರೆ ಎಂದೂ ಅವರು ಹೇಳಿದ್ದರು.

ಭಾರತದಲ್ಲಿ ಸುಮಾರು ಎರಡು ಕೋಟಿ ಅಕ್ರಮ ಬಾಂಗ್ಲಾದೇಶಿ ವಲಸಿಗರಿದ್ದಾರೆ ಎಂದು ಸರಕಾರವು ಕಳೆದ ವರ್ಷದ ನ.16ರಂದು ಸಂಸತ್ತಿನಲ್ಲಿ ತಿಳಿಸಿತ್ತು.

ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಗುರುತಿಸಿ ಗಡೀಪಾರು ಮಾಡಲು ಜಿಲ್ಲಾಮಟ್ಟಗಳಲ್ಲಿ ಕಾರ್ಯಪಡೆಗಳನ್ನು ಸ್ಥಾಪಿಸುವಂತೆ ಕೇಂದ್ರವು ರಾಜ್ಯ ಸರಕಾರಗಳಿಗೆ ನಿರ್ದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News