ರಾಜ್ಯದಲ್ಲಿ ಕನ್ನಡಿಗರಿಗೆ ಕನ್ನಡದಲ್ಲೇ ಸಂದರ್ಶನ ಅವಕಾಶ : ಜನಾಭಿಪ್ರಾಯ ರೂಪಿಸಲು ಪ್ರಮೋದ್ ಕರೆ

Update: 2017-08-13 14:24 GMT

ಉಡುಪಿ, ಆ.13: ಸ್ವಾತಂತ್ರ ಪೂರ್ವದಲ್ಲಿ ನಮ್ಮ ದೇಶ ಇಂಗ್ಲಿಷರ ಗುಲಾಮರಾಗಿತ್ತು. ಆದರೆ ಸ್ವಾತಂತ್ರಾ ನಂತರ ನಾವು ಇಂಗ್ಲಿಷ್‌ನ ಗುಲಾಮ ರಾಗಿದ್ದೇವೆ. ಈ ಇಂಗ್ಲಿಷ್ ವ್ಯಾಮೋಹದಿಂದ ನಮ್ಮ ಮಕ್ಕಳಿಗೆ ಕನ್ನಡದ ಮೇಲಿನ ಅಭಿಮಾನ ಇಲ್ಲವಾಗುತ್ತಿದೆ. ಹಾಗು ಹೆತ್ತವರು ಕೂಡ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಲು ಪ್ರಾಶಸ್ತ್ಯ ನೀಡುತಿದ್ದಾರೆ. ಇದರಿಂದ ಕನ್ನಡ ಶಾಲೆಗಳ ಅಸ್ತಿತ್ವ ಇಲ್ಲವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಆಯೋಜಿಸಲಾದ ಕರವೇ ಉಡುಪಿ ತಾಲೂಕು ಮಟ್ಟದ ಸಮಾವೇಶ ‘ಕನ್ನಡ ನುಡಿ ಬೆಳಕು-2017’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಪಾನ್, ಜರ್ಮನಿ, ರಶ್ಯದಂತ ದೇಶಗಳನ್ನು ನೋಡಿ. ಅಲ್ಲಿನ ಜನತೆಗೆ ತಮ್ಮ ಭಾಷೆಯ ಮಮಕಾರವಿದೆ. ಅಭಿಮಾನವಿದೆ. ಅವರು ತಮ್ಮ ಮಾತೃಭಾಷೆಗೆ ಪ್ರಥಮ ಆದ್ಯತೆ ನೀಡಿ, ನಂತರ ಇಂಗ್ಲೀಷ್‌ಗೆ. ಆದರೆ ನಮ್ಮಲ್ಲಿ ಅಂಥ ಅಭಿಮಾನ ಇಲ್ಲದೇ ಹೋಗಿರುವುದರಿಂದ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ ಎಂದರು.

ಕನ್ನಡಿಗರ ಭಾಷಾಭಿಮಾನದ ಕೊರತೆಯಿಂದ, ಕನ್ನಡ ಶಾಲೆಯಲ್ಲಿ ಓದಿದ ಪ್ರತಿಭಾವಂತ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಸಂದರ್ಶನಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಮಾಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಆದುದರಿಂದ ರಾಜ್ಯದಲ್ಲಿ ಉದ್ಯೋಗಕ್ಕಾಗಿ ಸಂದರ್ಶನ ನಡೆಸುವ ಸಂಸ್ಥೆಗಳಿಗೆ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ವ್ಯವಹರಿಸುವ ಅವಕಾಶವನ್ನು ನೀಡಬೇಕೆನ್ನುವ ಸಂದೇಶ ರವಾನಿಸಬೇಕು. ಹಾಗೂ ಸರಕಾರ ಇದನ್ನು ಅನುಷ್ಠಾನಗೊಳಿಸಲು ಜನಾಭಿಪ್ರಾಯ ಮೂಡಿಸಬೇಕಾದ ಅಗತ್ಯವಿದೆ ಎಂದವರು ಹೇಳಿದ್ದಾರೆ.

ರಾಜ್ಯದ ಕರಾವಳಿ ಪ್ರದೇಶದಲ್ಲಿ ತುಳು, ಕೊಂಕಣಿ, ಬ್ಯಾರಿ, ಉರ್ದು, ಮರಾಠಿ ಇತ್ಯಾದಿ ಭಾಷೆಗಳ ಜನರು ನೆಲೆಸಿದ್ದಾರೆ. ಇವರೆಲ್ಲರೂ ಒಗ್ಗಟ್ಟಾದರೆ ಮಾತ್ರ ಕನ್ನಡ ಉಳಿವು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಲು ಕನ್ನಡಿಗರ ದೃಢಸಂಕಲ್ಪದಿಂದ ಮಾತ್ರ ಸಾಧ್ಯವೇ ಹೊರತು ಯಾವುದೇ ಹೊರಶಕ್ತಿಗಳಿಂದ ಸಾಧ್ಯವಿಲ್ಲ.ನಾವು ಕನ್ನಡವನ್ನು ಕೊಲ್ಲಬೇಕೆಂದೇ ನಿರ್ಧಾರ ಮಾಡಿದಲ್ಲಿ ಅದನ್ನು ಉಳಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಪ್ರಮೋದ್ ಮಾರ್ಮಿಕವಾಗಿ ನುಡಿದರು.

ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲ್ಮಾಡಿ ಆರೋಗ್ಯಮಾತೆ ಚರ್ಚ್‌ನ ಧರ್ಮಗುರು ಗಳಾದ ವಂ. ಆಲ್ಬನ್ ಡಿಸೋಜ, ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ಅಕ್ಬರ್ ಅಲಿ ಮಾತನಾಡಿದರು. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಅವರು ಸಲ್ಲಿಸಿದ ಸೇವೆುನ್ನು ಗುರುತಿಸಿ ಸನ್ಮಾನಿಸಲಾಯಿತು.

ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತುಳು ಚಲನಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ನವೀನ್ ಡಿ ಪಡೀಲ್, ಜೆಡಿಎಸ್‌ನ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೇಶ್ ಶೆಟ್ಟಿ, ಯುವ ಉದ್ಯಮಿ ಅಮೃತ್ ಶೆಣೈ ಹಾಗೂ ಕರವೇ ರಾಜ್ಯ ಮತ್ತು ಜಿಲ್ಲಾ ಸಮಿತಿಗಳ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕರವೇ ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುದೇಶ್ ಶೇಟ್ ಅತಿಥಿಗಳನ್ನು ಸ್ವಾಗತಿಸಿದರೆ, ತಾಲೂಕು ಅಧ್ಯಕ್ಷ ಸುಜಯ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News